ನೀವು ಮನಸ್ಸಿನಲ್ಲಿ ಅಂದುಕೊಂಡ ಬಯಕೆಯ ಭವಿಷ್ಯ ಹೇಳುತ್ತೆ ಈ ಒಳಕಲ್ಲು ತೀರ್ಥ. ಋಷಿ ಮುನಿ, ಮಹರ್ಷಿಗಳು ತಪಸ್ಸು ಮಾಡಿದ ಪುಣ್ಯ ಕ್ಷೇತ್ರ ಈ ಶಿವಗಂಗಾ ಬೆಟ್ಟ.

ನೀವು ಮನಸ್ಸಿನಲ್ಲಿ ಅಂದುಕೊಂಡ ಬಯಕೆಯ ಭವಿಷ್ಯ ಹೇಳುತ್ತೆ ಈ ಒಳಕಲ್ಲು ತೀರ್ಥ. ಋಷಿ ಮುನಿ, ಮಹರ್ಷಿಗಳು ತಪಸ್ಸು ಮಾಡಿದ ಪುಣ್ಯ ಕ್ಷೇತ್ರ ಈ ಶಿವಗಂಗಾ ಬೆಟ್ಟ.

ನಮಸ್ತೆ ಪ್ರಿಯ ಓದುಗರೇ, ಕಡಿದಾದ ಬೆಟ್ಟ ಗುಡ್ಡಗಳ ಮೇಲೆ ಶಾಂತ ಚಿತ್ತನಾಗಿ ಕುಳಿತು ತನ್ನ ಬಳಿ ಬೇಡಿ ಬರುವ ಭಕ್ತರನ್ನು ಹರಸುತ್ತ ಇರುವ ಸ್ವಾಮಿ ಇವನು. ಈ ಕ್ಷೇತ್ರಕ್ಕೆ ಹೋದ್ರೆ ಹೆಜ್ಜೆ ಹೆಜ್ಜೆಗೂ ಶಿವಲಿಂಗ ದ ದರ್ಶನ ಮಾಡಿ ಪುನೀತರಾಗಬಹುದು. ಬನ್ನಿ ಇಂದಿನ ಲೇಖನದಲ್ಲಿ ಶಿವಗಂಗಾ ಬೆಟ್ಟದಲ್ಲಿ ನೆಲೆ ನಿಂತ ಗಂಗಾಧರೇಶ್ವರ ಸ್ವಾಮಿಯ ದರ್ಶನ ಮಾಡಿ ಕೃತಾರ್ಥರಾಗೋಣ. ಬೆಂಗಳೂರಿನ ಹೆಬ್ಬಾಗಿಲು ಎಂದು ಕರೆಯುವ ಶಿವಗಂಗಾ ಬೆಟ್ಟವು ಸಮುದ್ರ ಮಟ್ಟದಿಂದ 4,547 ಅಡಿ ಎತ್ತರವಾಗಿದ್ದು ಈ ಬೆಟ್ಟವನ್ನು ಪೂರ್ವಾಭಿಮುಖವಾಗಿ ನೋಡಿದ್ರೆ, ವೃಷಭಕ್ರುತಿಯ ಹಾಗೆ, ಪಶ್ಚಿಮಾಭಮುಖವಾಗಿ ನೋಡಿದ್ರೆ ಗಣಪತಿ, ಉತ್ತರದಿಂದ ನೋಡಿದ್ರೆ ಸರ್ಪಾಕೃತಿ, ಮತ್ತು ದಕ್ಷಿಣಾಭಿಮುಖವಾಗಿ ನೋಡಿದ್ರೆ ಲಿಂಗಾಕೃತಿಯಲ್ಲಿ ಕಾಣಿಸುತ್ತೆ. ಹಿಂದೆ ಕಣಾದ ಎಂಬ ಮಹರ್ಷಿಗಳು ಏಕ ಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ್ರು. ಅವರ ತಪೂಷಕ್ತಿಯಿಂದಾಗಿ ಶಿವನ ಜಟೆಯಿಂದ ನೀರು ಭೂಮಿಗೆ ಹರಿದು ಬಂದು ಅದನ್ನು ಕಂಡ ಮಹರ್ಷಿಗಳು ಶಿವಗಂಗಾ ಎಂದು ಕೂಗಿಕೊಂಡ ರು. ಹೀಗಾಗಿ ಈ ಕ್ಷೇತ್ರವನ್ನಾ ಶಿವಗಂಗಾ ಎಂದು ಕರೆಯುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ಈ ದೇವಾಲಯದ ಗರ್ಭ ಗುಡಿಯಲ್ಲಿರುವ ಈಶ್ವರನ ಲಿಂಗ. ಈ ಕ್ಷೇತ್ರಕ್ಕೆ ಬಂದು ತುಪ್ಪವನ್ನು ಶಿವನ ಲಿಂಗದ ಮೇಲೆ ಹಾಕಿದರೆ ಆ ತುಪ್ಪವು ನಮ್ಮ ಕಣ್ಣೆದುರೇ ಬೆಣ್ಣೆಯಾಗಿ ಪರಿವರ್ತನೆಗೊಳ್ಳುತ್ತದೆ. ಇಂತಹ ಪವಾಡವನ್ನು ನಾವು ಬೇರೆ ಕ್ಷೇತ್ರದಲ್ಲಿ ನೋಡಲು ಸಾಧ್ಯವಿಲ್ಲ.

 

ಈ ದೇಗುಲದಲ್ಲಿ ಗಂಗಾಧರೇಶ್ವರ ನ ಜೊತೆ ನಂದಿ, ವೀರಭದ್ರ ಸ್ವಾಮಿ, ಹೊನ್ನಾವರ ದೇವಿ ಕೂಡ ನೆಲೆಸಿದ್ದಾರೆ. ಇಲ್ಲಿಗೆ ಬಂದು ದೇವರ ಎದುರು ನಿಂತು ಶಾಕನಾಮ ಯುತಂ ಜಲಂ ರುಚಿಕರಮ್ ಖಂಡೋಜ್ವಲಂ / ತಾಂಬೂಲಂ ಮನಸಾಮಾಯ ವಿರಚಿತಮ್ ಭಕ್ತ್ಯಾ ಪ್ರಭೋ ಸ್ವೀಕುರು //. ಎಂಬ ಶ್ಲೋಕವನ್ನು ಭಕ್ತಿಯಿಂದ ಪಠಿಸಿದರೆ, ಅಥವಾ ಈಶ್ವರ ಪರಮೇಶ್ವರ ಜಗದೇಶ್ವರ ಪರ್ವತೀಪತಿ ದಿಗಂಬರ ಹೀಗೆ ಈ ಯಾವ ಹೆಸರಿನಿಂದ ಭಜನೆ ಮಾಡಿದರೂ ಈ ಗಂಗಾಧರೇಶ್ವರ ಸ್ವಾಮಿ ನಮ್ಮ ಮನಸಿನ ಅಭೀಷ್ಟೆಗಳನ್ನು ಈಡೇರಿಸುವಂತೆ ಅನುಗ್ರಹ ನೀಡುತ್ತಾನೆ. ಇಷ್ಟು ಮಾತ್ರವಲ್ಲ ಈ ಸ್ಥಳದಲ್ಲಿ ಅಗಸ್ತ್ಯ ಮುನಿಗಳು ತಪಸ್ಸನ್ನು ಮಾಡಿದ್ದರು ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿಗೆ ಬಂದರೆ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಲಿಂಗಗಳನ್ನು ನೋಡಬಹುದು. ಇಲ್ಲಿರುವ ರಹಸ್ಯ ಸುರಂಗ ಮಾರ್ಗದೊಳಗೆ ಹೋದರೆ ಅದು ಶ್ರೀ ರಂಗ ಪಟ್ಟಣಕ್ಕೆ ತಲುಪುತ್ತದೆ ಎಂದು, ಇನ್ನೂ ಕೆಲವರು ಈ ಸುರಂಗವು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳುತ್ತಾರೆ. ಇನ್ನೂ ಈ ಬೆಟ್ಟದ ಮೇಲೆ ರಾಜ ವಿಷ್ಣುವರ್ಧನನ ಪತ್ನಿ ಶಂತಾಲಾದೇವಿ ದೇಹ ತ್ಯಾಗ ಮಾಡಿದಳು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಶಿವಗಂಗಾ ಬೆಟ್ಟಕ್ಕೆ ಬರುವ ಪ್ರತಿಯೊಬ್ಬ ಭಕ್ತ ರೂ ದರ್ಶನ ಮಾಡೋದು ಇಲ್ಲಿನ ಒಳಕಲ್ಲು ತೀರ್ಥವನ್ನು ಕಡಿದಾದ ಸುರಂಗದೊಳಗೆ ಇರುವ ಈ ತೀರ್ಥ ದಲ್ಲೀ ವರ್ಷದ 365 ದಿನಗಳೂ ನೀರಿನಿಂದ ತುಂಬಿರುತ್ತದೆ. ರೇವಣ ಸಿದ್ಧೇಶ್ವರ ರ ತಪಸ್ಸಿನ ಫಲದಿಂದ ಉದ್ಭವ ಆಗಿರೋ ಈ ಒಳಕಲ್ಲು ತೀರ್ಥ ದಲ್ಲಿ ಕೈಹಾಕಿ ಅದೃಷ್ಟವನ್ನು ಪರೀಕ್ಷಿಸಬಹುದು.

 

ಕೈ ಹಾಕಿದಾಗ ನೀರು ಸಿಕ್ಕರೆ ನಮ್ಮ ಮನಸ್ಸಿನ ಕಾರ್ಯ ಈಡೇರುತ್ತದೆ ಎಂದು ನೀರು ಸಿಗಲಿಲ್ಲ ಅಂದರೆ ನಮ್ಮ ಆಸೆ ಈಡೇರುವುದಿಲ್ಲ ಎಂದು ಈ ಒಳಕಲ್ಲು ತೀರ್ಥ ಭವಿಷ್ಯ ಹೇಳುತ್ತೆ. ಹೀಗಾಗಿ ಈ ಕುತೂಹಲಕಾರಿ ಸಂಗತಿಯನ್ನು ಪ್ರತಿಯೊಬ್ಬ ಭಕ್ತರು ಪರೀಕ್ಷಿಸಿ ನೋಡುತ್ತಾರೆ. ಬೆಟ್ಟದ ತುತ್ತ ತುದಿಯಲ್ಲಿ ಶಿವನ ವಾಹನವಾದ ನಂದಿ ಯನ್ನೂ ಪ್ರತಿಷ್ಠಾಪನೆ ಮಾಡಲಾಗಿದ್ದು, ನಂದಿಯ ಸುತ್ತ ಪ್ರದಕ್ಷಿಣೆ ಹಾಕಿದರೆ ನಮ್ಮೆಲ್ಲ ಕಷ್ಟಗಳು ಮಾಯ ಆಗುತ್ತವೆ ಎಂದೂ ಇಲ್ಲಿಗೆ ಬರುವ ಭಕ್ತರ ಅಚಲವಾದ ನಂಬಿಕೆ. ಈ ಕ್ಷೇತ್ರದಲ್ಲಿ ಕೆಂಪೇಗೌಡರು ಸಲ್ಲಿಸಿದ ಬೆಳ್ಳಿ ಗಂಟೆಯನ್ನು ಕೂಡ ನಾವು ನೋಡಬಹುದು. ಪ್ರತಿವರ್ಷ ಮಕರ ಸಂಕ್ರಾಂತಿಯ ದಿನದಂದು ಇಲ್ಲಿ ಗಂಗಾಧರೇಶ್ವರ ನ ಜಾತ್ರೆ ನಡೆಯುತ್ತದೆ. ಶಿವರಾತ್ರಿಯನ್ನೂ ಈ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಆಚರಿಸುತ್ತಾರೆ. ಆ ಸಮಯದಲ್ಲಿ ಸರ್ವಾಲಂಕಾರ ನಾದ ಗಂಗಾಧರೇಶ್ವರ ಸ್ವಾಮಿಯನ್ನು ನೋಡೋದೇ ಕಣ್ಣಿಗೊಂದು ಹಬ್ಬವಾಗಿದೆ. ಈ ದೇವಸ್ಥಾನವು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ತೆರೆದಿರುತ್ತದೆ. ಭಕ್ತರು ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದಾಗಿದೇ. ಕುಮತ್ವತಿ ನದಿಯ ಉಗಮ ಸ್ಥಾನ ಆಗಿರುವ ಈ ಶಿವಲಿಂಗ ಬೆಟ್ಟವು ಬೆಂಗಳೂ ರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿದೆ. ಈ ಕ್ಷೇತ್ರವು ಬೆಂಗಳೂರಿನಿಂದ 54 ಕಿಮೀ, ತುಮಕೂರಿನಿಂದ 24 ಕಿಮೀ, ಮೈಸೂರಿನಿಂದ 147 ಕಿಮೀ, ಮಂಡ್ಯದಿಂದ 103 ಕಿಮೀ ದೂರದಲ್ಲಿದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮಧ್ಯಾನ 12.30 ರಿಂದ 3 ಗಂಟೆ ವರೆಗೆ ಅನ್ನದಾಸೋಹ ವ್ಯವಸ್ಥೆ ಇರುತ್ತದೆ. ಶಿವಗಂಗಾ ಬೆಟ್ಟಕ್ಕೆ ಬೆಂಗಳೂರು, ತುಮಕೂರಿನಿಂದ ಕರ್ನಾಟಕ ಸಾರಿಗೆ ವ್ಯವಸ್ಥೆ ಇದೆ. ಸಾಧ್ಯವಾದರೆ ನೀವು ಒಮ್ಮೇ ಈ ಅಪರೂಪದ ಪವಾಡ ಕ್ಷೇತ್ರಕ್ಕೆ ಜೀವಮಾನದಲ್ಲಿ ಭೇಟಿ ನೀಡಿ. ಶುಭದಿನ.

ಭಕ್ತಿ