ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ಪರಮೇಶ್ವರನಿಗೆ ಕಟ್ಟಿರುವ ದೇವಾಲಯಗಳಿಗೆ ಲೆಕ್ಕವೇ ಇಲ್ಲ. ಕೆಲವೊಂದು ಕಡೆ ಜಗದೇಶ್ವರನು ಪಾರ್ವತಿ ಸಮೇತನಾಗಿ ನೆಲೆ ನಿಂತರೆ ಇನ್ನೂ ಕೆಲವು ಕಡೆ ಗಂಗೆಯ ಜೊತೆ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಾನೆ. ಅದ್ರಲ್ಲೂ ಪರಮೇಶ್ವರನು ಮಲ್ಲಿಕಾರ್ಜುನ ಸ್ವಾಮಿ ಆಗಿ ನೆಲೆ ನಿಂತ ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಗಂಗೆ ಉದ್ಭವ ಆಗುತ್ತೆ ಎನ್ನುವುದು ಈ ದೇಗುಲದಲ್ಲಿ ಮಾತ್ರ ನಡೆಯುವ ಸೂಜಿಗದ ಸಂಗತಿ ಆಗಿದೆ. ಬನ್ನಿ ಹಾಗಾದರೆ ಈ ಕ್ಷೇತ್ರ ಯಾವುದು ಅಲ್ಲಿನ ಮಹಿಮೆಗಳನ್ನು ಏನೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ವೇದಾವತಿ ನದಿಯ ತಟದ ಮೇಲೆ ಮಲ್ಲಿಕಾರ್ಜುನ ಸ್ವಾಮಿಯ ಭವ್ಯವಾದ ದೇಗುಲ ಇದ್ದು, ಈ ದೇಗುಲವನ್ನು ವೀರಶೆಟ್ಟಿ ಎಂಬುವವರು ಕಟ್ಟಿಸಿದ್ದು ದೇಗುಲವನ್ನು ಕ್ರಿಸ್ತಶಕ 1102 ರಲ್ಲೀ ಹೊಯ್ಸಳ ರಾಜನಾದ ಹರಿಹರ ಸೋಮೇಶ್ವರ ಜೀರ್ಣೋದ್ಧಾರ ಮಾಡಿದ ಎಂದು ಹೇಳಲಾಗುತ್ತದೆ.
ನಕ್ಷತ್ರ ಆಕಾರದಲ್ಲಿ ನಿರ್ಮಿಸಿರುವ ಈ ಆಲಯದ ಸುತ್ತಲೂ ಕಂಬಗಳಿಂದ ಕೂಡಿದ ಪ್ರಾಕಾರವಿದ್ದು, ಮೂರು ಅಂತಸ್ತಿನ ರಾಜ ಗೋಪುರವು ದೇಗುಲದ ಸೌಂದರ್ಯವನ್ನು ಹೆಚ್ಚಿಸಿದೆ. ಗರ್ಭಗುಡಿ, ಅಂತರಾಳ, ಪ್ರದಕ್ಷಿಣಾ ಪಥ, ವಿಶಾಲವಾದ ಪ್ರಾಂಗಣ ಹೊಂದಿರುವ ಇಲ್ಲಿನ ಮುಖ ಗರ್ಭಗುಡಿ ಒಳಗೆ ಮಲ್ಲಿಕಾರ್ಜುನ ಸ್ವಾಮಿಯು ಗಂಗೆ ಸಮೇತನಾಗಿ ಉದ್ಭವ ಮೂರ್ತಿಯಾಗಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದನೇ. ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಮಕ್ಕಳಿಲ್ಲದ ದಂಪತಿಗಳಿಗೆ ಭಗವಂತನು ಉತ್ತಮವಾದ ಸಂತಾನ ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ದೇವನನ್ನು ನಂಬಿ ಪೂಜಿಸುವವರು ಎಲ್ಲಾ ಮನೋ ಕಾಮನೆಗಳ ಶೀಗ್ರವಾಗಿ ನೆರವೇರುತ್ತದೆ ಎನ್ನುವುದು ಈ ಕ್ಷೇತ್ರದ ಪ್ರಖ್ಯಾತಿಗೆ ಕಾರಣ ಆಗಿದೆ. ಈ ಸ್ಥಳದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಬಂದು ನೆಲೆ ನಿಲ್ಲುವುದ ರ ಹಿಂದೆ ಒಂದು ರೋಚಕ ಘಟನೆ ಇದೆ. ಬಹಳ ಹಿಂದೆ ಇಲ್ಲಿ ವೀರಶೆಟ್ಟಿ ಎಂಬ ಗೌಡ ಇದ್ದು, ಅವನು ಸಂತಾನ ಇಲ್ಲದೆ ಕೊರಗುತ್ತಾ ಇರುತ್ತಾನೆ. ಒಂದಿನ ಅವನ ಬಳಿ ಇದ್ದ ಹಸು ಇಂದು ವೇದಾವತಿ ನದಿಯ ದಡದ ಬಳಿ ಇರುವ ಹುತ್ತಕ್ಕೆ ಹಾಲು ಏರೆಯುವುದನ್ನು ನೋಡ್ತಾನೆ. ನಂತರ ಉತ್ತವನ್ನು ಹೊಡೆದಾಗ ಅಲ್ಲಿ ಮಲಗಿದ್ದ ಸರ್ಪವೊಂದು ಪೂರ್ವ ದಿಕ್ಕಿನಲ್ಲಿ ಹರಿದು ಹೋಗುತ್ತೆ.
ಆ ರಾತ್ರಿ ವೀರಶೆಟ್ಟಿ ಕನಸಿನಲ್ಲಿ ಪರಮೇಶ್ವರ ಕಾಣಿಸಿಕೊಂಡು ಇಂದು ನೀನು ಹುತ್ತವನ್ನು ನೋಡಿರುವ ಸ್ಥಳದಲ್ಲಿ ನಾನು ಮಲ್ಲಾಸುರ ಎಂಬ ರಾಕ್ಷಸನನ್ನು ಸಂಹರಿಸಿದ್ದೆ ಹೀಗಾಗಿ ಆ ಜಾಗದಲ್ಲಿ ದೇಗುಲವನ್ನು ನಿರ್ಮಿಸು ನಿನಗೆ ಸಂತಾನ ಆಗುತ್ತೆ ಎಂದು ಹೇಳಿದನಂತೆ. ಶಿವನ ಅಪ್ಪಣೆಯಂತೆ ಗೌಡನು ಎರಡು ಅಂಕಣದ ಆಲಯವನ್ನು ನಿರ್ಮಿಸಿದ ಮೇಲೆ ಅವನಿಗೆ ಗಂಡು ಸಂತಾನ ಆಗುತ್ತೆ. ಇಲ್ಲಿನ ದೇವರ ಮಹಿಮೆಯನ್ನು ಕಂಡು ಹರಿಹರೇಶ್ವರ ರಾಜನು ಮಕ್ಕಳಾದರೆ ಇನ್ನೂ ಬೃಹದಾಕಾರದ ದೇಗುಲವನ್ನು ಕಟ್ಟಿಸುತ್ತೇನೆ ಎಂದು ಹರಕೆ ಹೊರುತ್ತಾರೆ. ಆಮೇಲೆ ಈ ರಾಜನಿಗೆ ಕೂಡ ದೇವರ ಆಶೀರ್ವಾದದಿಂದ ಸಂತಾನ ಭಾಗ್ಯ ಲಭಿಸಿತು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಆಲಯದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಜೊತೆಗೆ ವಿಗ್ನೇಶ್ವರ, ನವಗ್ರಹ, ಚೌಡೇಶ್ವರಿ ಅಮ್ಮನವರು, ನಾಗದೇವತೆ, ವೀರಭದ್ರ ಸ್ವಾಮಿ, ಭದ್ರ ಕಾಳಮ್ಮನ ಗುಡಿಗಳು ಇವೆ. ಇತ್ತೀಚೆಗೆ ದೇಗುಲದ ಎದುರು 25 ಅಡಿ ಎತ್ತರದ ಮಂದಸ್ಮಿತ ಧ್ಯಾನ ಮುದ್ರೆಯಲ್ಲಿರುವ ಶಿವನ ಮೂರ್ತಿಯನ್ನು ನಿರ್ಮಿಸಿದ್ದು, ಇದು ನೋಡುಗರ ಕಣ್ಮನ ತಣಿಸುವ ಅದ್ಭುತ. ಪ್ರತಿ ವರ್ಷವೂ ಇಲ್ಲಿ ಪಲ್ಗುಣ ಮಾಸದ ಶುದ್ಧ ನಕ್ಷತ್ರದಂದು ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಆ ಸಮಯದಲ್ಲಿ ಬರುವ ಹುಬ್ಬಾ ನಕ್ಷತ್ರದಲ್ಲಿ ಇಲ್ಲಿರುವ ಗುಡಿಯಲ್ಲಿ ಇರುವ ಶಿವನ ಜಟೆಯಲ್ಲಿ ಗಂಗೆ ಉದ್ಭವ ಆಗುತ್ತೆ. ಇದು ವರ್ಷದಲ್ಲಿ ಒಂದು ಬಾರಿ ನಡೆಯುವ ಅಪರೂಪದ ಪವಾಡ ಆಗಿದ್ದು, ಈ ಗಂಗೆ ಉದ್ಭವ ನೋಡಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ನಿತ್ಯ ತ್ರಿಕಾಲ ಪೂಜೆ ನಡೆಯುವ ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿಯನ್ನು ನಿತ್ಯ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಸಂಜೆ 5 ಗಂಟೆಯಿಂದ ರಾತ್ರಿ 8 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಮಂಗಳಾರತಿ, ರುದ್ರಾಭಿಷೇಕ, ಅಲಂಕಾರ ಸೇವೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಮಲ್ಲಿಕಾರ್ಜುನ ಸ್ವಾಮಿ ನೆಲೆನಿಂತ ಈ ಭವ್ಯ ಆಲಯವು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿ ಸಮೀಪದ ಪುರ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ಭವ್ಯ ದೇಗುಲಕ್ಕೆ ಭೇಟಿ ನೀಡಿ ಅಲ್ಲಿನ ವೈಶಿಷ್ಟ್ಯತೆ ತಿಳಿದು ಪಾವನರಾಗಿ. ಶುಭದಿನ.