ನಮಸ್ತೆ ಪ್ರಿಯ ಓದುಗರೇ, ಭೂಮಿಯ ಮೇಲೆ ರಾಕ್ಷಸರ ಅಟ್ಟಹಾಸ ಮೀರಿದಾಗ ಜಗನ್ಮಾತೆಯು ತನ್ನ ಘೋರ ರೂಪವನ್ನು ತಾಳಿ ಅವರನ್ನು ದಮನ ಮಾಡುತ್ತಾಳೆ. ಅಮ್ಮಾ ಎಂದು ಭಕ್ತಿಯಿಂದ ಕರೆದರೆ ಸಾಕು ತಾಯಿಯ ಮಾತೃ ಹೃದಯ ಕರಗಿ ನೀರಾಗಿ ಹೋಗುತ್ತೆ. ಬನ್ನಿ ಇವತ್ತಿನ ಲೇಖನದಲ್ಲಿ ಉತ್ತರ ಕರ್ನಾಟಕ ಜನರನ್ನು ರಕ್ಷಣೆ ಮಾಡುತ್ತಿರುವ ಚಿಂಚಳೀ ಮಾಯಕ್ಕ ದೇವಿಯನ್ನು ದರ್ಶನ ಮಾಡಿ ಬರೋಣ. ಭಕ್ತರು ಪ್ರೀತಿಯಿಂದ ಮಾಯಕ್ಕ, ಮಾಯವ್ವ, ಮಾಯಗಾರತಿ, ಮಹಮಾಯಿ, ಮಾಯಮ್ಮ ಇನ್ನೂ ಮುಂತಾದ ಹೆಸರುಗಳಿಂದ ಕರೆಯುವ ಈ ದೇವಿಯು ಆದಿಶಕ್ತಿ ಜಗನ್ಮಾತೆಯ ಶಕ್ತಿ ರೂಪ ಆಗಿದ್ದಾಳೆ. ದೇವತೆಯು ಗರ್ಬಗುಡಿಯಲ್ಲಿ ಅತ್ಯಾಕರ್ಷಕ ಆಗಿದ್ದು, ಐದು ಹೆಡೆಗಳ ಸರ್ಪದ ಆಶ್ರಯ ಪಡೆದು ತಲೆಯ ಮೇಲೆ ಕಿರೀಟ ಹೊಂದಿದ್ದಾಳೆ. ಚತುರ್ಭುಜ ಆದ ತಾಯಿಯು ಮುಂಗೈಯಲ್ಲಿ ಬಳೆಗಳನ್ನು ತೊಟ್ಟು, ಖಡ್ಗ, ತ್ರಿಶೂಲ ಹಾವನ್ನು ಹಿಡಿದು ಮಂದಸ್ಮಿತ ಆಗಿ ಭಕ್ತರಿಗೆ ದರ್ಶನ ನೀಡ್ತಾ ಇದ್ದಾಳೆ. ಈ ದೇವಿಯ ಮುಂದೆ ದೀಪವನ್ನು ಹಚ್ಚಿದರೆ ಪಾಪಗಳು ಪರಿಹಾರ ಆಗಿ ಮನದ ಕೋರಿಕೆಗಳು ಎಲ್ಲವೂ ಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ.
ಛಿಂಚಳೀ ಗ್ರಾಮದ ಮೊದಲ ಆದಿ ದೇವತೆ ಹಿರಿ ದೇವಿಯಾಗಿದ್ದು, ಇಂದಿಗೂ ಹಿರಿ ದೇವಿಗೆ ನೈವೇದ್ಯ ಅರ್ಪಿಸಿದ ನಂತರವೇ ಮಾಯಕ್ಕ ದೇವಿಗೆ ನೈವೇದ್ಯ ಹಾಗೂ ಪೂಜೆ ಮಾಡುವ ಪರಿಪಾಠ ಈ ದೇಗುಲದಲ್ಲಿ ನಡೆದುಕೊಂಡು ಬಂದ ಪದ್ಧತಿ ಆಗಿದೆ. ಬಹಳ ಹಿಂದೆ ಹಿಲ ಹಾಗೂ ಕೀಟ ಎಂಬ ರಾಕ್ಷಸರು ದೇವರಿಂದ ಗಂಡು ಹೆಣ್ಣು ಪ್ರಾಣಿ ಪಕ್ಷಗಳಿಂದ ತಮಗೆ ಮರಣ ಬರಬಾರದು ಎಂದು ವರವನ್ನು ಪಡೆದು ಇಲ್ಲಿರುವ ಜನರಿಗೆ ಹಿಂಸೆ ನೀಡ್ತಾ ಇದ್ರು ಆಗ ಇವರನ್ನು ಸಂಹರಿಸಲು ದೇವಿಯು ಅರ್ಧ ನಾರಿಶ್ವರನ ರೂಪವನ್ನು ತಾಳಿ ಇಲ್ಲಿಗೆ ಬಂದು ಅಸುರನನ್ನು ಸಂಹಾರ ಮಾಡಿ ಮುಂದೆ ಇದೆ ಕ್ಷೇತ್ರದಲ್ಲಿ ಮಾಯಕ್ಕ ಎಂಬ ಹೆಸರಿನಿಂದ ನೆಲೆ ನಿಂತಳು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ದೇವಿಯ ದೇವಸ್ಥಾನದ ಅರ್ಧ ಕಿಮೀ ದೂರದಲ್ಲಿ ಹಾಲಹಳ್ಳ ಎಂಬ ಸ್ಥಳವಿದೆ.
ನಿತ್ಯ ದೇವಿಗೆ ಅಭಿಷೇಕ ಮಾಡಲು ಈ ಹಾಲಹಳ್ಳ ಧಿಂದ ನೀರನ್ನು ತರಲು ಆಗ್ತಾ ಇದ್ದು, ಹುಣ್ಣಿಮೆಯ ದಿನ ದೇವಿಯು ಇಲ್ಲಿಗೆ ಬಂದು ಸ್ನಾನ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಹಳ್ಳದಲ್ಲಿ ಸ್ನಾನ ಮಾಡುವುದರಿಂದ ಸಕಲ ರೋಗಗಳು ದೂರವಾಗಿ ಬದುಕಿನ ಎಲ್ಲಾ ಸಂಕಷ್ಟಗಳು ತಾಯಿಯ ಕೃಪೆಯಿಂದ ದೂರವಾಗುತ್ತದೆ ಎಂದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ ಆಗಿದೆ. ಇಂದಿಗೂ ಪ್ರತಿವರ್ಷ ಇಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಕುರುಬ ಜನಾಂಗದವರು ದೇವಿಗೆ ಉಣ್ಣೆಯನ್ನು ತಂದು ಒಪ್ಪಿಸುವ ಪದ್ಧತಿ ಇದೆ. ಪ್ರತಿ ವರ್ಷ 15 ದಿನಗಳ ಕಾಲ ನಡೆಯುವ ಇಲ್ಲಿನ ಜಾತ್ರೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ಸೇರಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುವ ಕ್ಷೇತ್ರದಲ್ಲಿ ನವರಾತ್ರಿಯ ಒಂದೊಂದು ದಿನ ಒಂದೊಂದು ಬಗೆಯ ಅಲಂಕಾರ ಮಾಡಲಾಗುತ್ತದೆ. ಈ ದಿನದಲ್ಲಿ ಸರ್ವಾಲಂಕೃತ ಭೂಷಿತೆ ಆದ ದೇವಿಯನ್ನು ಕಣ್ಣು ತುಂಬಿಕೊಳ್ಳುವುದು ಬದುಕಿನ ಅತ್ಯಂತ ದೊಡ್ಡ ಭಾಗ್ಯವಾಗಿದೆ. ಅತ್ಯಂತ ಶಕ್ತಿಶಾಲಿ ಆದ ಈ ದೇವಿಯನ್ನು ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೂ ದರ್ಶನ ಮಾಡಬಹುದು. ಈ ಜಗನ್ಮಾತೆಯ ದೇಗುಲವು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚೆಳಿ ಎಂಬ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ನಿಮ್ಮ ಜೀವಮಾನದಲ್ಲಿ ಭೇಟಿ ನೀಡಿ. ಶುಭದಿನ