ನಮಸ್ತೆ ಪ್ರಿಯ ಓದುಗರೇ, ಸಪ್ತಗಿರಿವಾಸ ಶ್ರೀ ಶ್ರೀನಿವಾಸ ದೇವರನ್ನು ನಂಬದವರು ಯಾರಿದ್ದಾರೆ ಹೇಳಿ? ಅಪ್ಪ ತಿಮ್ಮಪ್ಪ ನೀನೇ ಗತಿಯಪ್ಪ ಎಂದು ಆತನ ಬಳಿ ಶರಣಾಗಿ ಹೋದ್ರೆ ಬದುಕಿನ ಸಕಲ ಕಷ್ಟಗಳು ದೂರ ಆದಂತೆ. ತಿರುಪತಿ ಹೋಗಿ ತಿಮ್ಮಪ್ಪನ ದರ್ಶನ ಮಾಡಲು ಆಗದವರು ಈ ಕ್ಷೇತ್ರಕ್ಕೆ ಹೋದರೆ ಸಾಕ್ಷಾತ್ ತಿಮ್ಮಪ್ಪನನ್ನು ನೋಡಿದಷ್ಟು ಪುಣ್ಯ ಬರುತ್ತಂತೆ. ಬನ್ನಿ ಹಾಗಾದರೆ ಆ ಕ್ಷೇತ್ರ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಂಡು ಬರೋಣ. ಹುಲುಗನ ಮುರಡಿ ಕ್ಷೇತ್ರವನ್ನು ದಕ್ಷಿಣದ ತಿರುಪತಿ ಎಂದು ಕರೆಯಲಾಗುತ್ತಿದ್ದು, ದೇಗುಲದ ಗರ್ಭ ಗುಡಿಯಲ್ಲಿ ಇರುವ ದೇವನನ್ನು ನಾಲ್ಕು ಯುಗಗಳಲ್ಲಿ ಪೂಜಿಸಲಾಗಿದೆ ಎಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ಶ್ರೀರಾಂಚಂದ್ರ ಪ್ರಭುವು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಕೂಡ ಇಲ್ಲಿ ನೆಲೆಸಿರುವ ಸ್ವಾಮಿಯನ್ನು ಪೂಜಿಸಿದರು ಎಂಬ ಉಲ್ಲೇಖವಿದೆ.
ಈ ಕ್ಷೇತ್ರಕ್ಕೆ ಹೋದರೆ ತಿರುಪತಿಗೆ ಹೊದಷ್ಟೇ ಪುಣ್ಯ ಲಭಿಸುತ್ತದೆ ಎಂದು ನಂಬಿಕೆ ಭಕ್ತರಲ್ಲಿದೆ. ಸುಂದರವಾದ ಕಲಾ ಕೆತ್ತನೆಗಳು ಇರುವ ಈ ಭವ್ಯ ಆಲಯವನ್ನೂ ಸುಮಾರು 500 ವರ್ಷಗಳ ಹಿಂದೆ ತೇಕೇಕನಾಂಬಿಯ ಕೇಶವ ಶೆಟ್ಟಿ ಎನ್ನುವವರು ಕಟ್ಟಿಸಿದ್ದು,ಮೆಟ್ಟಿಲು ಹತ್ತಿ ರಾಜ ಗೋಪುರದ ಮಾರ್ಗವಾಗಿ ದೇವಾಲಯವನ್ನು ಪ್ರವೇಶಿಸಿದರೆ ಮೊದಲಿಗೆ ಭೂದೇವಿ ಸಮೇತನಾಗಿ ನೆಲೆಸಿರುವ ವರಾಹ ಸ್ವಾಮಿಯ ದರ್ಶನ ಆಗುತ್ತೆ. ದೇಗುಲದ ತುಂಬೆಲ್ಲ ವಿಷ್ಣುವಿನ ದಶಾವತಾರದ ಕೆತ್ತನೆಗಳು ಇವೆ. ಆಲಯದ ಹಿಂಬಾಗದಲ್ಲಿ ಕಲ್ಯಾಣಿ ಶಂಖ ಚಕ್ರ ಸಹಿತನಾದ ವಿಷ್ಣುವಿನ ಪಾದವಿದೆ. ಇನ್ನೂ ದೇಗುಲದಿಂದ ಸ್ವಲ್ಪ ದೂರವಿರುವ ತೀರ್ಥದಲ್ಲಿ ಮಿಂದೆದ್ದು, ಈ ಸ್ವಾಮಿಯನ್ನು ಪೂಜಿಸಿದರೆ ವೈಕುಂಠ ಪ್ರಾಪ್ತಿ ಆಗುತ್ತೆ ಎಂಬ ನಂಬಿಕೆ ಇದೆ. ಮಾಂಡವ್ಯ ಕ್ಷೇತ್ರವೆಂದು ಪ್ರಸಿದ್ಧವಾದ ಈ ಕ್ಷೇತ್ರದಲ್ಲಿ ಬಹಳ ಹಿಂದೆ ಮಾಂಡವ್ಯ ಮಹಾಮುನಿಗಳು ತಪಸ್ಸು ಮಾಡಿದ್ರು ಎಂಬ ಪ್ರತೀತಿ ಇದ್ದು ಅವರ ತಪಸ್ಸಿಗೆ ಮೆಚ್ಚಿ ಶ್ರೀನಿವಾಸ ದೇವರು ಈ ಕ್ಷೇತ್ರದಲ್ಲಿ ಸ್ವಯಂಭೂ ಆಗಿ ನೆಲೆಸಿದ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ತಿರುಪತಿಯಲ್ಲಿ ಮಾಡಿಸಲಾಗದ ಪೂಜೆಗಳನ್ನು ಈ ಕ್ಷೇತ್ರಕ್ಕೆ ಬಂದು ಮಾಡಿಸಿದರೆ ಕೂಡ ತಿರುಪತಿ ತಿಮ್ಮಪ್ಪನಿಗೆ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇಲ್ಲಿಗೆ ಬಂದು ಶ್ರೀನಿವಾಸ ಕಲ್ಯಾಣ ಮಾಡಿಸುತ್ತೇವೆ ಎಂದು ಹರಕೆ ಹೊತ್ತ ಅವಿವಾಹಿತರಿಗೆ ಬಹು ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. ಅತ್ಯಂತ ಪ್ರಸಿದ್ಧವಾದ ಈ ದೇಗುಲವನ್ನು ದಕ್ಷಿಣದ ಶೇಷಾದ್ರಿ ಎಂದು ಕರೆಯುತ್ತಾರೆ. 800 ವರ್ಷಗಳಿಂದ ಒಂದೇ ಕುಟುಂಬದ ಪೀಳಿಗೆಯವರು ಈ ದೇವರನ್ನು ಪೂಜಿಸಿಕೊಂಡು ಬರಲಾಗುತ್ತಿದೆ. ಭಕ್ತರು ಬೇಡಿದ ವರಗಳನ್ನು ಕರುಣಿಸುವ ಈ ವೆಂಕಟರಮಣ ಸ್ವಾಮಿಯನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಸಾಕ್ಷಾತ್ ಶ್ರೀನಿವಾಸ ದೇವರು ವೆಂಕಟರಮಣ ಆಗಿ ನೆಲೆಸಿದ ಈ ಕ್ಷೇತ್ರವು ಚಾಮರಾಜ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹುಲುಗನ ಮುರುಡಿ ಎಂಬ ಬೆಟ್ಟದ ಮೇಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ತಿಮ್ಮಪ್ಪನ ದರ್ಶನ ಮಾಡಿ ಬನ್ನಿ. ಶುಭದಿನ.