ಶ್ರಾವಣ ಮಾಸದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿಗೆ ನಡೆಯುತ್ತೆ ವಿಶೇಷ ಬೆಣ್ಣೆ ಅಲಂಕಾರ..!!!

ಶ್ರಾವಣ ಮಾಸದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿಗೆ ನಡೆಯುತ್ತೆ ವಿಶೇಷ ಬೆಣ್ಣೆ ಅಲಂಕಾರ..!!!

ನಮಸ್ತೆ ಪ್ರಿಯ ಓದುಗರೇ, ಆಂಜನೇಯ ಅಂದ್ರೆ ಶಕ್ತಿ ಇವನ ಹೆಸರನ್ನು ಮನಸ್ಸಿನಲ್ಲಿ ನೆನೆದರೆ ಸಾಕು ನಮಗೆ ಧೈರ್ಯ ಬರುತ್ತೆ. ಎಷ್ಟೇ ಕಷ್ಟಕರ ಕೆಲಸ ಇರಲಿ ಈತನ ಅನುಗ್ರಹ ಒಂದಿದ್ದರೆ ಅದು ಹೂವನ್ನು ಎತ್ತಿದಷ್ಟು ಸುಲಲಿತವಾಗುತ್ತೆ. ಬನ್ನಿ ಇವತ್ತಿನ ಲೇಖನದಲ್ಲಿ ರಾಮಬಂಟ ಪ್ರಸನ್ನ ವೀರಾಂಜನೇಯ ಸ್ವಾಮಿಯನ್ನು ದರ್ಶನ ಮಾಡಿ ಆತನ ಕೃಪೆಗೆ ಪಾತ್ರರಾಗೋಣ. ಬೆಂಗಳೂರಿನ ಮಹಾಲಕ್ಷ್ಮಿ ಲೆಯೌಟ್ ನಲ್ಲಿ ಈ ಪ್ರಸನ್ನ ವೀರಾಂಜನೇಯ ಸ್ವಾಮಿ ದೇಗುಲವಿದೆ. ಈ ದೇವರನ್ನು ಎಕಶಿಲೆಯಲ್ಲಿ ಕೆತ್ತಲಾಗಿದೆ. ತೈಲ ವರ್ಣದಲ್ಲಿ ಇರುವ ಈ ಸ್ವಾಮಿಯು 22 ಅಡಿ ಎತ್ತರ 16ಅಡಿ ಅಗಲ ಹಾಗೂ ನಾಲ್ಕು ಅಡಿ ದಪ್ಪವಾಗಿ ಇದ್ದಾನೆ. ಇಂದ ಕೈಯಲ್ಲಿ ಗದೆ ಇನ್ನೊಂದು ಕೈಯಲ್ಲಿ ಸಂಜೀವಿನಿ ಪರ್ವತ ಕುತ್ತಿಗೆಯಲ್ಲಿ ಮಣಿಯ ಹಾರ ಎದೆಯ ಮಧ್ಯದಲ್ಲಿ ರಾಮ ಮತ್ತು ಸೀತೆಯ ವಿಗ್ರಹ ಹೊಂದಿರುವ ಈ ದೇವರನ್ನೂ ನೋಡುವುದೇ ಒಂದು ದಿವ್ಯ ಅನುಭೂತಿ. ಈ ಕ್ಷೇತ್ರಕ್ಕೆ ಬರುವ ಭಕ್ತರು ಸ್ವತಃ ತಾವೇ ದೇವರ ಪಾದಕ್ಕೆ ಅಭಿಷೇಕ ಮಾಡಬಹುದು.

ಈ ದೇವರಿಗೆ ವಿಲ್ಯೆದೇಲೆ ಅರ್ಪಿಸಿವುದರಿಂದ ನಮ್ಮ ಮನಸ್ಸಿನ ಎಲ್ಲಾ ಕೋರಿಕೆಗಳು ಶೀಘ್ರವಾಗಿ ನೆರವೇರುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ರಾತ್ರಿ ಕನಸಿನಲ್ಲಿ ಕೆಟ್ಟ ಕನಸುಗಳು ಬೀಳುತ್ತಾ ಇದ್ರೆ, ಆರೋಗ್ಯ ಸಮಸ್ಯೆ ಇದ್ರೆ, ಮಕ್ಕಳು ಹಠ ಮಾಡ್ತಾ ಇದ್ರೆ, ದೃಷ್ಟಿ ತಗುಲಿದರೆ ಈ ದೇವಸ್ಥಾನಕ್ಕೆ ಬಂದು ಆಂಜನೇಯನ ತಾಯತ ಕಟ್ಟಿಸಿಕೊಂಡು ಹೋದ್ರೆ ಈ ಸಮಸ್ಯೆಗಳು ಎಲ್ಲವೂ ಸ್ವಾಮಿಯ ದಿವ್ಯ ದೃಷ್ಟಿಯಿಂದ ದೂರವಾಗುತ್ತದೆ. ಈ ದೇವಸ್ಥಾನದಲ್ಲಿ ಆಂಜನೇಯನ ಜೊತೆ ತಾವರೆ ಹೂವಿನ ಮೇಲೆ ಕುಳಿತ ಮಹಾಲಕ್ಷ್ಮಿ ವಿಗ್ರಹವನ್ನು ಕೂಡ ಸ್ಥಾಪನೆ ಮಾಡಲಾಗಿದೆ. ಈ ದೇವಿಗೆ ಪೂಜೆ ಮಾಡಿಸುವುದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿನ ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಪ್ರೀಯವಾಗಿದ್ದು, ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ದಿನ ಸುಮಾರು 3 ಸಾವಿರ ಕೆಜಿ ಬೆಣ್ಣೆ ಬಳಸಿ ದೇವರಿಗೆ ಅಲಂಕಾರ ಮಾಡಲಾಗುತ್ತದೆ. ಸ್ವಾಮಿಯ ಪಾದಕ್ಕೆ ನಿತ್ಯ ಅಭಿಷೇಕ, ಪಂಚಾಮೃತ ಸೇವೆಗಳನ್ನು ಮಾಡಿಸಬಹುದು. ಭಾನುವಾರ ಹಾಗೂ ವಿಶೇಷ ದಿನಗಳಂದು ದೇವರಿಗೆ ಕ್ರೇನ್ ಮೂಲಕ ಮಹಾಭಿಷೇಕ ಮಾಡಲಾಗುತ್ತೆ. ಇದಲ್ಲದೆ ದೇವಾಲಯದ ವಾರ್ಷಿಕೋತ್ಸವ, ಹನುಮಾನ್ ಜಯಂತಿ ಹಾಗೂ ಶ್ರೀರಾಮ ನವಮಿಯಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.

ನಿತ್ಯ ದೇವರಿಗೆ ಉದ್ದಿನ ವಡೆಯ ಹಾರವನ್ನು ಹಾಕಿ ಪೂಜೆ ಮಾಡಲಾಗುತ್ತೆ. ಇಷ್ಟು ಮಾತ್ರವಲ್ಲ ಇಲ್ಲಿರುವ ಹನುಮಂತ ದೇವರಿಗೆ ಬೆಳ್ಳಿ ಮತ್ತು ಬಂಗಾರದ ಕವಚಗಳನ್ನು ಹಾಕಲಾಗುತ್ತದೆ ಹಾಗೂ ಸಿಂಧೂರವನ್ನು ಕೂಡ ಲೇಪನ ಮಾಡಲಾಗುತ್ತೆ. ಮಾರುತಿ ದೇವನ ಜೊತೆಗೆ ಇಲ್ಲಿ ನೆಲೆ ನಿಂತಿರುವ ಮಹಾಲಕ್ಷ್ಮಿ ದೇವರಿಗೆ ನಿತ್ಯ ಅಭಿಷೇಕ ಮಾಡಿ ಪ್ರತಿ ಶುಕ್ರವಾರ ದೇವಿಗೆ ಮಹಾಭಿಷೇಕ ಮಾಡಲಾಗುತ್ತೆ. ವರ ಮಹಾಲಕ್ಷ್ಮಿ ಹಬ್ಬ ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸಂಜೀವಿನಿ ಪರ್ವತವನ್ನು ಹೊತ್ತುಕೊಂಡಿರುವ ಈ ಸ್ವಾಮಿಯನ್ನು ಯಾವ ಹೆಸರಿನಿಂದ ಕರೆದರೂ ಆತ ಸಂತುಷ್ಟ ಆಗುತ್ತಾನೆ. ಈ ಸ್ವಾಮಿಯನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 8.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಭಕ್ತಾದಿಗಳು ದೇವರಿಗೆ ಅಲಂಕಾರ ಸೇವೆ,ಅಭಿಷೇಕ ಸೇವೆ, ಸಿಂಧೂರ ಲೇಪನ ಸೇವೆ, ಬೆಣ್ಣೆ ಸೇವೆ, ಕುಂಕುಮಾರ್ಚನೆ, ವಿಲ್ಯೆದೇಲೆ ಸೇವೆ ಮಾಡಿಸಬಹುದು. ಈ ದೇವಾಲಯವು ಮಹಾಲಕ್ಷ್ಮಿ ಲೇಔಟ್ ನ ನಾಲ್ಕನೇ ಮುಖ್ಯ ರಸ್ತೆಯಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಿರಿ. ಶುಭದಿನ.

ಭಕ್ತಿ