ನಮಸ್ತೆ ಆತ್ಮೀಯ ಓದುಗರೇ, ಪ್ರತಿಯೊಂದು ದೇವಾಲಯವು ತನ್ನದೇ ಆದ ಮಹತ್ವ ಹೊಂದಿರುತ್ತದೆ. ಕೆಲವೊಂದು ದೇವಾಲಯಗಳು ದೇವರ ಸಾನಿಧ್ಯ ಕೆ ಪ್ರಸಿದ್ಧವಾದರೆ, ಮತ್ತೆ ಕೆಲವು ದೇಗುಲಗಳು ದೇಗುಲದ ವಾಸ್ತುಶಿಲ್ಪಕ್ಕೆ ಪ್ರಸಿದ್ಧಿ ಪಡೆದಿರುತ್ತದೆ. ಮತ್ತೆ ಕೆಲವು ದೇಗುಲಗಳು ಸಂತಾನ ಸಮಸ್ಯೆ, ಚರ್ಮ ರೋಗ ನಿವಾರಣೆಗೆ ಪ್ರಸಿದ್ಧಿ ಆದ್ರೆ, ಇನ್ನೂ ಕೆಲವು ದೇಗುಲಗಳು ಸಿದ್ಧಿ ಪುರುಷರ ಪಾದ ಸ್ಪರ್ಶದಿಂದ ಪುನೀತ ಆಗಿರುತ್ತವೆ. ಬನ್ನಿ ಇವತ್ತಿನ ಲೇಖನದಲ್ಲಿ ಅನೇಕ ವಿಶೇಷತೆಗಳಿಂದ ಕೂಡಿದ ಹಾಗೂ ಕಾಳಸರ್ಪ ದೋಷದಂತಹ ಕಠಿಣ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ವಿಶಿಷ್ಟ ಕ್ಷೇತ್ರವನ್ನು ದರ್ಶನ ಮಾಡಿ ಬರೋಣ. ಪ್ರಾಚೀನ ಕೃತಿಗಳಲ್ಲಿ ಹೇಮಂಗ ದೇಶ ಎಂದು ಗುರುತಿಸಿದ ಅತಿಶಯ ಸಿದ್ಧಿ ಕ್ಷೇತ್ರ ಎಂದೇ ಪ್ರಸಿದ್ಧಿ ಆಗಿರುವ ಮಲೆಯೂರಿನ ಕನಕಗಿರಿಯನ್ನೂ ಸಾಕೋಪಾಮನ ಶೈಲ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸಕೋಪಾಮನ ಶೈಲ ಅಂದ್ರೆ ಸ್ವರ್ಗದಂತಹ ಸ್ಥಳ ಎಂದರ್ಥ.
ಇದು ಜೈನ ಧರ್ಮದವರ ಪುಣ್ಯ ಕ್ಷೇತ್ರ ಆದ್ರೂ ಈ ಕ್ಷೇತ್ರಕ್ಕೆ ಹಿಂದೂ ಧರ್ಮದ ಜನರು ಭೇಟಿ ನೀಡಿ ಪೂಜೆಯನ್ನು ಸಲ್ಲಿಸುತ್ತಾರೆ. ಸುಮಾರು 350 ಮೆಟ್ಟಿಲುಗಳು ಇರುವ ಬೆಟ್ಟದ ಮೇಲೆ ಹತ್ತಿಕೊಂಡು ಹೋದ್ರೆ ಈ ಭವ್ಯವಾದ ಆಲಯವನ್ನು ಕಣ್ಣು ತುಂಬಿಕೊಳ್ಳಬಹುದು. ಈ ಆಲಯವು ಮುಖ ಮಂಟಪ, ನವರಂಗ, ಸುಖಾಸೀನ ಮತ್ತು ಗರ್ಬಗೃಹ ಹೊಂದಿದೆ. ಆಲಯದ ಪ್ರಧಾನ ದೇವತೆ ಆಗಿ ಭಗವಾನ್ ಪಾಷ್ವನಾಥ,ಪದ್ಮಾವತಿ ದೇವಿ ಕುಷ್ಮಾಂಡಿನಿ ದೇವಿ ಮತ್ತು ಕ್ಷೇತ್ರ ಪಾಲ ಬ್ರಹ್ಮ ಯಕ್ಷನನ್ನು ಪೂಜಿಸಲಾಗುತ್ತದೆ. ಕಾಳಸರ್ಪ ದೋಷದಿಂದ ಬಳಲುವವರು ಈ ಕ್ಷೇತ್ರಕ್ಕೆ ಬಂದು ಪೂಜೆಯನ್ನು ಸಲ್ಲಿಸಿ ಹೋದ್ರೆ ಕಾಳಸರ್ಪ ದೋಷಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಸಾಕಷ್ಟು ಜನರು ಈ ಕ್ಷೇತ್ರಕ್ಕೆ ಬಂದು ತಮ್ಮ ಕಾಳಸರ್ಪ ದೋಷವನ್ನು ದೂರ ಮಾಡುವಂತೆ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಜೈನ ಧರ್ಮೀಯರ ಪಾಲಿಗಂತೂ ಇದು ಸಿದ್ಧಿ ಕ್ಷೇತ್ರವಾಗಿದ್ದು, ಭಗವಾನ್ ಶ್ರೀ ಮಹಾವೀರರು ತಮ್ಮ ಪ್ರವಾಸದ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ ದರು ಎಂಬ ಉಲ್ಲೇಖವಿದೆ. ಹೀಗಾಗಿ ಈ ಸ್ಥಳಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಮನಸಿನ ಆಶೋತ್ತರಗಳು ಸಿದ್ಧಿ ಆಗುತ್ತೆ ಎಂಬ ಪ್ರತೀತಿ ಇದೆ.
ಇನ್ನೂ ಈ ಕ್ಷೇತ್ರಕ್ಕೆ ಕನಕಗಿರಿ ಎಂಬ ಹೆಸರು ಬರಲು ಒಂದು ದಂತ ಕಥೆಯನ್ನು ಹೇಳಲಾಗುತ್ತದೆ. ಹಿಂದೆ ಈ ಬೆಟ್ಟದ ಮೇಲೆ ನಾಗಾರ್ಜುನ ಎಂಬುವವರು ಪದ್ಮಾವತಿ ದೇವಿಯ ಕುರಿತಾಗಿ ಘೋರವಾದ ತಪಸ್ಸನ್ನು ಆಚರಿಸಲು ಪ್ರಾರಂಭ ಮಾಡಿದರು ಅತ್ಯಂತ ನಿಷ್ಠೆಯಿಂದ ನಾಗಾರ್ಜುನ ರು ಮಾಡಿದ ತಪಸ್ಸನ್ನು ಮೆಚ್ಚಿ ಪದ್ಮಾವತಿ ದೇವಿಯು ಪ್ರತ್ಯಕ್ಷ ಆಗಿ ಭಕ್ತ ನೀನು ಮುಟ್ಟಿದ್ದೆಲ್ಲಾ ಚಿನ್ನವಾಗಲಿ ಎಂದು ವರವನ್ನು ನೀಡುತ್ತಿದ್ದೇನೆ ಎಂದು ಹೇಳಿದಳು. ನಾಗಾರ್ಜುನ ರಿಗೇ ದೇವಿ ಪ್ರತ್ಯಕ್ಷಳಾಗಿ ನೀನು ಮುಟ್ಟಿದ್ದೆಲ್ಲಾ ಕನಕ ಅಂದ್ರೆ ಚಿನ್ನ ಆಗಲಿ ಎಂದು ವರವನ್ನು ನೀಡಿದ್ದರಿಂದ ಈ ಕ್ಷೇತ್ರವನ್ನು ಕನಕಗಿರಿ ಎಂದು ಕರೆಯಲಾಯಿತು ಎಂದು ಹೇಳಲಾಗುತ್ತದೆ. ಇನ್ನೂ ಕೆಲವರು ಈ ಪ್ರದೇಶದಲ್ಲಿ ಸಾಕಷ್ಟು ಶ್ರೀಗಂಧ ತೇಗದ ಮರಗಳ ಬೆಳೆಯುವುದರಿಂದ ಅವಕ್ಕೆ ಚಿನ್ನದ ಬೆಲೆ ಇರುವುದಕ್ಕೆ ಈ ಹೆಸರು ಬಂದಿದೆ ಎಂದೂ ಹೇಳುತ್ತಾರೆ. ಇವಿಷ್ಟೂ ಮಾತ್ರವಲ್ಲದೆ ಆಲಯದ ಹೊರ ಭಾಗದಲ್ಲಿ 24 ಜೈನ ತೀರ್ಥಂಕರ ರ ಪ್ರತಿಮೆಗಳು ಇವೆ. ಇತ್ತೀಚೆಗೆ ಎತ್ತರದ ಬಾಹುಬಲಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಈ ದೇವಾಲಯವು ದಿನದ 24 ಗಂಟೆಯೂ ದರ್ಶನಕ್ಕೆ ಸಿಗುತ್ತದೆ. ಈ ಜೈನ ಆಲಯವು ಚಾಮರಾಜನಗರ ಜಿಲ್ಲೆಯ ಸಮೀಪದ ಮಲೆಯೂರು ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ಸಕಲ ಕಾಳಸರ್ಪ ದೋಷಗಳು ನಿವಾರಣೆ ಆಗುವ ಈ ಜೈನ ದೇಗುಲಕ್ಕೆ ಭೇಟಿ ನೀಡಿ ಅಲ್ಲಿನ ವೈಶಿಷ್ಟ್ಯತೆ ತಿಳಿಯಿರಿ. ಶುಭದಿನ.