ನಮಸ್ತೆ ಪ್ರಿಯ ಓದುಗರೇ, ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯುವುದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮನುಷ್ಯರು ಮಾತ್ರವಲ್ಲ ಭಗವಂತನು ಕೂಡ ಸುಂದರವಾದ ನಿಸರ್ಗದ ಮಡಿಲಲ್ಲಿ ನೆಲೆ ನಿಲ್ಲಲು ಇಷ್ಟ ಪಡುತ್ತಾನೆ ಅನ್ನುವುದಕ್ಕೆ ಈ ದೇಗುಲವು ಸುಂದರವಾದ ಉದಾಹರಣೆ ಆಗಿದೆ. ಬನ್ನಿ ಹಾಗಾದರೆ ಸಾಕ್ಷಾತ್ ಪರಮೇಶ್ವರ ಇಷ್ಟ ಪಟ್ಟು ಬಂದು ನೆಲೆಸಿದ ಪ್ರಕ್ತೃತಿಯ ಸುಂದರವಾದ ತಾಣವನ್ನು ಇವತ್ತಿನ ಲೇಖನದಲ್ಲಿ ದರ್ಶನ ಮಾಡಿ ಬರೋಣ. ಹಚ್ಚ ಹಸುರಿನ ಪ್ರದೇಶ, ಸ್ವಚ್ಛಂದವಾಗಿ ಹರಿಯುವ ನೀರಿನ ಬೋರ್ಗರೆತ, ಅಲ್ಲಲ್ಲಿ ಕಾಣ ಸಿಗುವ ಪ್ರಾಣಿ ಪಕ್ಷಿಗಳ ಸುಂದರವಾದ ನೋಟ. ಮುಗಿಲನ್ನು ಹೊತ್ತು ಮಲಗಿರುವಂತೆ ಅನುಭವ ನೀಡುವ ಬೆಳ್ಳಿ ಮೋಡಗಳು. ದೇಗುಲದಿಂದ ಕೇಳಿ ಬರುವ ಘಂಟಾನಾದ. ಮನಸ್ಸನ್ನು ಶಾಂತಗೊಳಿಸಿ ನಮ್ಮನ್ನು ದೇವರ ಚರಣ ಕಮಲದಲ್ಲಿ ಮಿಂದೇಳುವಂಥೆ ಮಾಡುವ ವಿಶೇಷವಾದ ಪರಿಸರ. ಇವನ್ನೆಲ್ಲ ನಾವು ಕಣ್ಣು ತುಂಬಿಕೊಳ್ಳಬೇಕು ಅಂದ್ರೆ ಕನಕಪುರದ ಸಮೀಪದಲ್ಲಿ ಇರುವ ಹಿರೇ ಮಡಿವಾಳದ ಅರಣ್ಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು.
ದಟ್ಟ ಕಾನನದ ಮಧ್ಯದಲ್ಲಿ ಶಿವನಂಕರೇಶ್ವರ ದೇವಸ್ಥಾನ ಇದ್ದು, ಈ ದೇಗುಲವು ಸುಮಾರು 900 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿದೆ. ಈ ಕ್ಷೇತ್ರದಲ್ಲಿ ಇರುವ ಶಿವಲಿಂಗವು ಸ್ವಯಂಭೂ ಉದ್ಭವ ಲಿಂಗ ಆಗಿದ್ದು, ಪರಮೇಶ್ವರನು ಸುತ್ತಮುತ್ತಲಿನ ಹಳ್ಳಿಯವರ ಮನೆ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ. ಬದುಕಿನಲ್ಲಿ ಅದೆಷ್ಟೇ ಕಷ್ಟಗಳು ಬರಲಿ ಈ ಕ್ಷೇತ್ರಕ್ಕೆ ಬಂದು ಶಿವನಂಕೇಶ್ವರ ನಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಸಕಲ ಕಷ್ಟಗಳು ಪರಿಹಾರ ಆಗುತ್ತೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಮನದ ಮಾತಾಗಿದೆ. ಅಲ್ಲದೆ ಈ ಕ್ಷೇತ್ರಕ್ಕೆ ಬಂದು ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲನ್ನು ಇಟ್ಟು ಪ್ರಾರ್ಥಿಸಿ ಹೋದ್ರೆ, ಸ್ವಂತ ಮನೆ ಕಟ್ಟುವ ಆಸೆ ಶೀಘ್ರವಾಗಿ ನೆರವೇರುತ್ತದೆ ಎಂಬ ಪ್ರತೀತಿ ಇದೆ. ಸಾಕಷ್ಟು ಜನ ಈ ದೇವನ ಕೃಪೆಯಿಂದ ಸ್ವಂತ ಮನೆ ಕಟ್ಟಿಕೊಂಡು ಸುಖವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಿರುವ ಈ ದೇಗುಲವನ್ನು ಚೋಳರು ನಿರ್ಮಿಸಿರಬಹುದು ಎಂಬ ಅಭಿಪ್ರಾಯ ಇದೆ. ಇಂದಿಗೂ ಕೂಡ ಈ ದೇಗುಲವನ್ನು ಯಾರು ಕಟ್ಟಿರಬಹದು ಎಂಬ ಬಗ್ಗೆ ಸ್ಪಷ್ಟವಾದ ಉತ್ತರ ದೊರಕಿಲ್ಲ.
ಸಾಮಾನ್ಯವಾಗಿ ಎಲ್ಲ ದೇಗುಲಗಳಲ್ಲಿ ಶಿವನ ಮುಂದೆ ನಂದಿಯನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ ಆದ್ರೆ ಈ ದೇಗುಲದಲ್ಲಿ ಬಲ ಭಾಗದಲ್ಲಿ ನಂದಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿರುವ ನಂದಿ ವಿಗ್ರಹ ಭಿನ್ನವಾಗಿ ಇದ್ರೂ ನಂದಿಯ ವಿಗ್ರಹಕ್ಕೆ ನಿತ್ಯ ಪೂಜೆ ಮಾಡಲಾಗುತ್ತದೆ. ದೇವಾಲಯದ ಹಿಂದುಗಡೆ ಪುಟ್ಟ ತೋರೆಯೊಂದು ಹರಿಯುತ್ತಿದ್ದು, ಈ ನದಿಯಲ್ಲಿ ಮಿಂದೆದ್ದು ಶಿವನನ್ನು ಪೂಜೆ ಮಾಡಿದ್ರೆ ಪಾಪಗಳು ದೂರವಾಗಿ ಮೋಕ್ಷ ದೊರಕುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿ ಹರಿಯುವ ನೀರು ತುಂಬಾ ಶುದ್ಧವಾಗಿದ್ದು. ಹರಿದು ಬರುವ ನೀರಿಗೆ ಪುಟ್ಟದಾದ ಕಟ್ಟೆಯನ್ನು ಕಟ್ಟಲಾಗಿದೆ. ಹೀಗಾಗಿ ಈ ನೀರಿನಲ್ಲಿ ಸ್ನಾನ ಮಾಡಿ ನೀರಾಟ ಆಡಿ ಖುಷಿ ಪಡಬಹುದು. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಶಿವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಲ್ಲದೆ ಶಿವರಾತ್ರಿಯಂದು ರಥೋತ್ಸವ ಜರುಗುತ್ತದೆ. ನಿಸರ್ಗದ ಮಡಿಲಲ್ಲಿ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹಾರಸುತ್ತ ಇರುವ ಶಿವಾನಂಕರೇಶ್ವರ ಸ್ವಾಮಿಯನ್ನು ನಿತ್ಯ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಮಾತ್ರ ದರ್ಶನ ಮಾಡಬಹುದು. ಭಾನುವಾರ ದೇಗುಲವನ್ನು ಮಧ್ಯಾನ ಒಂದು ಗಂಟೆವರೆಗೂ ತೆರೆದಿರುತ್ತದೆ. ಈ ದೇವಾಲಯವು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಬರುವ ಹಿರೇ ಮಡಿವಾಳದ ಸಮೀಪದ ಮುಗುರು ಅರಣ್ಯದಲ್ಲಿ ಇದೆ. ಸಾಧ್ಯವಾದರೆ ಶಿವನ ದರ್ಶನದ ಜೊತೆಗೆ ಪ್ರಕೃತಿ ಸೌಂದರ್ಯ ಸವಿಯಲು ಉತ್ತಮವಾದ ಈ ಸ್ಥಳಕ್ಕೆ ಭೇಟಿ ನೀಡಿ ಶಿವನ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.