ನಮಸ್ತೆ ಪ್ರಿಯ ಓದುಗರೇ, ಚಿನ್ನದ ನಾಡು ಶಿಲ್ಪ ಕಲೆಗಳ ಬೀಡು ಎಂದು ಕ್ಯಾಥವಾಗಿರುವ ಕೋಲಾರದಲ್ಲಿ ನೆಲೆ ನಿಂತು ಈ ಕ್ಷೇತ್ರದ ಜನರನ್ನು ಉದ್ಧರಿಸುತ್ತಿದ್ದಾಳೆ ಈ ಶಕ್ತಿಶಾಲಿ ಮಾತೆ. ಈ ತಾಯಿಯ ಅನುಗ್ರಹ ಇದ್ದರೆ ಬಂದ ಸಂಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಕೋಲಾರಮ್ಮ ದೇವಿಯ ದರ್ಶನ ಮಾಡಿ ಪುನೀತರಾಗೋಣ. ನೂರಾರು ವರ್ಷಗಳಷ್ಟು ಪುರಾತನವಾದ ಈ ದೇವಾಲಯದಲ್ಲಿ ಪಾರ್ವತಿ ದೇವಿಯು ಅಷ್ಟ ಭುಜವನ್ನು ಹೊಂದಿ, ಮಹಿಷಾಸುರ ಮರ್ಧಿನಿ ರೂಪವನ್ನು ತಾಳಿ ಕೋಲಾರಮ್ಮ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾಳೆ. ಈ ದೇವಿಯ ವಿಗ್ರಹದಲ್ಲಿ ಮೂಗು ವಿರೂಪ ಆಗಿರುವ ಕಾರಣ ದೇವಿಯನ್ನು ಮೂಕ ಆಚರಮ್ಮ ಎಂದು ಹೇಳಲಾಗುತ್ತದೆ. ಈ ಕ್ಷೇತ್ರಕ್ಕೆ ಬಂದು ನಿಂಬೆ ಹಣ್ಣನ್ನು ದೇವಿಗೆ ಸಲ್ಲಿಸುತ್ತೇವೆ ಎಂದು ಹರಕೆ ಹೊತ್ತರೆ ನಮ್ಮ ಮನಸ್ಸಿನ ಎಲ್ಲಾ ಆಶೋತ್ತರಗಳನ್ನು ಈ ದೇವಿ ಕರುಣಿಸುತ್ತಾಳೆ.
ಅಲ್ಲದೆ ಈ ಕ್ಷೇತ್ರಕ್ಕೆ ಬಂದು ನಿಂಬೆ ಹಣ್ಣು ಸಲ್ಲಿಸಿ ತಾಯತ ಕಟ್ಟಿಸಿಕೊಳ್ಳುವುದರಿಂದ ಬಹಳಷ್ಟು ಸಮಸ್ಯೆಗಳು ದೂರವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ. ಸಾಮಾನ್ಯವಾಗಿ ಬೇರೆಲ್ಲಾ ದೇವಸ್ಥಾನಗಳಲ್ಲಿ ಬಗೆ ಬಗೆಯ ತಿಂಡಿಗಳನ್ನು ಪ್ರಸಾದವಾಗಿ ನೀಡುವುದನ್ನು ನೋಡಿರುತ್ತೇವೆ. ಆದ್ರೆ ಈ ಕೋಲಾರಮ್ಮ ನ ದೇವಾಲಯದಲ್ಲಿ ನಿಂಬೆ ಹಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ. ಹೀಗೆ ನೀಡುವ ನಿಂಬೆ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋದ್ರೆ ಎಲ್ಲಾ ಶುಭ ಆಗುತ್ತೆ ಎಂದು ಹೇಳಲಾಗುತ್ತದೆ. ಇನ್ನೂ ಮೈಸೂರಿನ ಮಹಾರಾಜರು ಈ ದೇವಿಯ ಪರಮ ಭಕ್ತರಾಗಿದ್ದು, ಆಗಾಗ ಈ ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯುತ್ತಿದ್ದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಕ್ಷೇತ್ರದಲ್ಲಿ ಚೆಲಮ್ಮ, ಅಥವಾ ಚೆಳಮ್ಮ ಎಂಬ ಹೆಸರಿನಿಂದ ಕರೆಯುವ ದೇವತೆ ವಾಸವಾಗಿದ್ದು, ಈ ದೇವಿಗೆ ಪೂಜೆ ಸಲ್ಲಿಸಿದರೆ ಚೇಳುಗಳ ಕಡಿತ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಚೇಳಿನ ಕಡಿತದಿಂದ ತೊಂದರೆ ಅನುಭವಿಸಿದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಅರಾಮದ ಉದಾಹರಣೆಗಳು ಸಾಕಷ್ಟಿವೆ.
ಇನ್ನೂ ದೇವಸ್ಥಾನದ ಒಳಗಡೆ ಪುಟ್ಟದಾದ ಬಾವಿ ಇದ್ದು, ಇಲ್ಲಿಗೆ ಬಂದವರು ಒಂದಾದರೂ ನಾಣ್ಯ ಬಾವಿಯೊಳಗೆ ಹಾಕಿ ವಾಪಸ್ ಹೋಗಬೇಕು ಎಂಬ ಪ್ರತೀತಿ ಇದೆ. ಗಂಗರ ಕಾಲದಲ್ಲಿ ನಿರ್ಮಾಣ ಆದ ದೇವಾಲಯ ಇದಾಗಿದ್ದು, ದೇವಾಲಯ ದ್ರಾವಿಡ ಶೈಲಿಯ ಅದ್ಭುತ ಕಲಾ ಕೆತ್ತನೆಗಳನ್ನು ಕೂಡಿದೆ. ಪೂರ್ವಾಭಿಮುಖವಾಗಿ ಇರುವ ಈ ದೇವಾಲಯದ ಮಹಾದ್ವಾರ ಅದ್ಭುತ ಶಿಲ್ಪ ಕಲೆಗಳಿಂದ ಕೂಡಿದ್ದು,20 ಅಡಿಗಳಿಗೆ ಹೆಚ್ಚು ಎತ್ತರವಿರುವ ದ್ವಾರ ಗೋಪುರಗಳು ಈ ದೇಗುಲದ ಪ್ರಮುಖ ಆಕರ್ಷಣೆ ಆಗಿದೆ. ಕೋಲಾರಮ್ಮ ನ ಜೊತೆ ಸಪ್ತ ಮಾಥ್ರುಕೆಯರೂ, ಕಾಲ ಭೈರೆಶ್ವರ ವಿಗ್ರಹಗಳು ಕೂಡ ಇವೆ. ಪ್ರತಿ ಮಂಗಳವಾರ ಶುಕ್ರವಾರ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಬಂದು ದೇವಿಗೆ ಪೂಜೆ ಸಲ್ಲಿಸಿದರೆ ಎಲ್ಲಾ ಶುಭ ಆಗುತ್ತೆ ಎಂದು ಹೇಳಲಾಗುತ್ತದೆ. ಶಕ್ತಿಶಾಲಿಯಾದ ಕೋಲಾರಮ್ಮ ನನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ದೇವಾಲಯವು ಕೋಲಾರ ಜಿಲ್ಲೆಯಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಭೇಟಿ ನೀಡಿ. ಶುಭದಿನ.