ನಮಸ್ತೆ ಪ್ರಿಯ ಓದುಗರೇ, ನದಿ, ಭೂಮಿ, ಅಗ್ನಿ, ವಾಯು ಅಷ್ಟೇ ಯಾಕೆ ಜಗತ್ತಿನ ಎಲ್ಲಾ ಚರಾಚರ ಜೀವಿಗಳಲ್ಲಿ ಭಗವಂತನ ಅಂಶವಿದೆ ಎಂದು ನಂಬಿರುವ ಧರ್ಮ ಅಂದ್ರೆ ಅದು ನಮ್ಮ ಸನಾತನ ಹಿಂದೂ ಧರ್ಮ. ಹರಿಯುವ ನೀರಿಗೆ ಬೀಸುವ ಗಾಳಿಗೆ ದೇವರ ರೂಪ ಕೊಟ್ಟ ನಮ್ಮ ಸಂಸ್ಕೃತಿಯಲ್ಲಿ ಗಂಗಾ ಮಾತೆಯನ್ನು ಜೀವ ದೇವತೆ ಎಂದೇ ಪೂಜಿಸಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಗಂಗಾ ನದಿಯ ಪುಣ್ಯವಾದ ಅಂಶವು ವರ್ಷಪೂರ್ತಿ ಹರಿಯುವ ಅಂತರಗಂಗೆ ದೇಗುಲವನ್ನು ದರ್ಶನ ಮಾಡಿ ಪುನೀತರಾಗೋಣ. ಶತಶೃಂಗ ಪರ್ವತ ಶ್ರೇಣಿಯಲ್ಲಿ ಇರುವ ಈ ಅಂತರಗಂಗೆ ಎನ್ನುವ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತಿತ್ತು. ಈ ಕ್ಷೇತ್ರಕ್ಕೆ ಹೋದ್ರೆ ಕಾಶಿಗೆ ಹೋದಷ್ಟೆ ಪುಣ್ಯ ಬರುತ್ತೆ ಎಂದು ಹೇಳಲಾಗುತ್ತದೆ. ಕಲ್ಲು ಬಂಡೆಗಳಿಂದ ಕೂಡಿರುವ ಈ ಬೆಟ್ಟದ ಮೇಲೆ ಕಾಶಿ ವಿಶ್ವೇಶ್ವರನ ಸನ್ನಿಧಾನ ಇದ್ದು, ಇಲ್ಲಿರುವ ಬಸವನ ಬಾಯಿಂದ ವರ್ಷದ ಎಲ್ಲಾ ಕಾಲದಲ್ಲೂ ನೀರು ಹರಿದು ಬರುತ್ತದೆ.
ಇಂದಿಗೂ ಕೂಡ ಈ ನೀರು ಗಂಗಾ ನದಿಯ ನೀರು ಎಂದೇ ಹೇಳಲಾಗುತ್ತಿದೆ. ಈ ನದಿಯಲ್ಲಿ ಮಿಂದೆದ್ದರೆ ಸಕಲ ರೋಗಗಳು ನಿವಾರಣೆ ಆಗುತ್ತೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ. ಇನ್ನೂ ಇಲ್ಲಿ ಗಂಗೆಯು ಅಂತರ್ಮುಖಿಯಾಗಿ ಹರಿಯುವ ಕಾರಣ ಈ ಕ್ಷೇತ್ರಕ್ಕೆ ಅಂತರಗಂಗೆ ಎಂಬ ಹೆಸರು ಬಂದಿದ್ದು, ಈ ಕಲ್ಯಾಣಿಯಲ್ಲಿ ಮಿಂದೆದ್ದು ವಿಶ್ವೇಶ್ವರನ ದರ್ಶನ ಮಾಡಿದ್ರೆ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಈಶ್ವರನ ಜೊತೆಗೆ ಗಣೇಶ ನಂದಿ ಹಾಗೂ ಆಂಜನೇಯ ಸ್ವಾಮಿಯನ್ನು ಕೂಡ ನಾವು ದರ್ಶನ ಮಾಡಬಹುದು. ಗಂಗೆಯು ಈ ಕ್ಷೇತ್ರದಲ್ಲಿ ಅಂತರಗಂಗೆ ಆಗಿ ಹರಿಯುತ್ತಿರುವ ಹಿಂದೆ ಪುರಾಣದ ಘಟನೆ ಕೂಡ ಇದೆ. ಹಿಂದೆ ಭಗೀರಥ ಮಹಾರಾಜ ಗಂಗೆಯನ್ನು ಭೂಮಿಗೆ ತರಲು ಇದೆ ಬೆಟ್ಟದ ಮೇಲೆ ನಿಂತು ತಪಸ್ಸನ್ನು ಮಾಡಿದನು. ನಂತರ ಅವನ ತಪಸ್ಸಿಗೆ ಮೆಚ್ಚಿದ ಗಂಗೆಯು ಶಿವನು ತನ್ನ ಜಟೆಯಲ್ಲಿ ಹಿಡಿದುಕೊಂಡರೆ ತಾನು ಭೂಮಿಗೆ ಬರುತ್ತೇನೆ ಎಂದು ಹೇಳಿದಳು.
ನಂತರ ಶಿವನು ಗಂಗೆಯನ್ನು ತನ್ನ ಶಿರದ ನೆಲೆ ಹಿಡಿದು ಇಟ್ಟುಕೊಂಡಿದ್ದರ ಫಲವಾಗಿ ಈ ಕ್ಷೇತ್ರದಲ್ಲಿ ಗಂಗೆಯು ಅಂತರ ಗಂಗೆಯಾಗಿ ಹರಿಯುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಇಷ್ಟೂ ಮಾತ್ರವಲ್ಲ ಪರಶುರಾಮನು ಇದೇ ಬೆಟ್ಟದ ಮೇಲೆ ನಿಂತು ಕ್ಷತ್ರಿಯರನ್ನು ಕೊಲ್ಲುವುದಾಗಿ ಶಪಥ ಮಾಡಿದ್ದನು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಹರಿಯುವ ಅಂತರಗಂಗೆ ಯ ನೀರು ತುಂಬಾ ಸಿಹಿ ಆಗಿದ್ದು ಈ ನೀರನ್ನು ಮನೆಗೆ ತೆಗೆದುಕೊಂಡು ಹೋಗಿ ಎಷ್ಟು ದಿನವಿಟ್ಟರೋ ಅದು ಕೆಡುವುದಿಲ್ಲ ಎಂದು ಹೇಳಲಾಗುತ್ತದೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ಇಲ್ಲಿರುವ ದೇವರನ್ನು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ಪುಣ್ಯ ಕ್ಷೇತ್ರವೂ ಕೋಲಾರ ಜಿಲ್ಲೆಯಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಕಾಶಿ ವಿಶ್ವನಾಥನ ದರ್ಶನ ಮಾಡಿ ಬಂದು ಆ ಶಿವನ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.