ನಮಸ್ತೆ ಪ್ರಿಯ ಓದುಗರೇ, ರಾಮಾಯಣ ಹಾಗೂ ಮಹಾಭಾರತ ಇವೆರಡೂ ನಮ್ಮ ಹಿಂದೂ ಧರ್ಮದ ಪವಿತ್ರ ಗ್ರಂಥಗಳು ಆಗಿದ್ದು, ರಾಮಾಯಣವು ಪಿತೃವಾಕ್ಯ ಪರಿಪಾಲನೆಯ ಮಹತ್ವವನ್ನು ಸಾರಿದರೆ, ಮಹಾಭಾರತವು ಮನುಷ್ಯನು ಕಷ್ಟ ಕಾಲದಲ್ಲಿಯೂ ಧರ್ಮ ಮಾರ್ಗವನ್ನು ಬಿಡದೇ ಹೇಗೆ ಜೀವನವನ್ನು ಸಾಗಿಸಬೇಕು ಎಂಬ ಮಹಾನ್ ಪಾಠವನ್ನು ಜಗತ್ತಿಗೆ ಸಾರಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಮಹಾಭಾರತದ ನಂಟನ್ನು ಹೊಂದಿರುವ ವಿದುರಾಶ್ವತ್ಥ ದ ಅಶ್ವತ್ಥ ನಾರಾಯಣ ಸ್ವಾಮಿಯ ದರ್ಶನ ಮಾಡಿ ಪುನೀತರಾಗೋಣ. ವಿದುರಾಶ್ವತ್ಥ ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆ ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರವಿರುವ ಚಂದದ ಕಮಾನು ನಮ್ಮನ್ನು ದೇಗುಲದ ಒಳಗಡೆ ಸ್ವಾಗತ ಮಾಡುತ್ತೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಬರೀ ನಾಗರ ಕಲ್ಲುಗಳು ಕಾಣಿಸುವ ಈ ದೇಗುಲದ ಸುತ್ತಲೂ ಅಶ್ವತ್ಥ ಹಾಗೂ ಬೇವಿನ ಮರಗಳನ್ನು ಬೆಳೆಸಲಾಗಿದೆ.
ಸುಂದರವಾದ ಪರಿಸರದ ಮಧ್ಯದಲ್ಲಿ ಅಶ್ವತ್ಥ ನಾರಾಯಣ ನು ನೆಲೆ ನಿಂತು ಇಲ್ಲಿಗೆ ಬರುವ ಭಕ್ತರನ್ನು ಹರಸುತ್ತಿದ್ದಾನೆ. ಮಹಾಭಾರತಕ್ಕೆ ಈ ಕ್ಷೇತ್ರಕ್ಕೆ ಬಿಡಿಸಲಾರದ ನಂಟು ಇದ್ದು, ಇಲ್ಲಿನ ಮೂಲ ಅಶ್ವತ್ಥ ಮರವನ್ನು ಧೃತರಾಷ್ಟ್ರ ಹಾಗೂ ಪಾಂಡುವಿನ ತಮ್ಮನಾದ ವಿದುರನು ನೆಟ್ಟು ಪೋಷಿಸಿದರು ಎಂದು ಹೇಳಲಾಗುತ್ತದೆ. ವಿದುರನು ನೆಟ್ಟು ಪೋಷಿಸಿದ ಅಶ್ವತ್ಥ ಮರ ಇರುವುದರಿಂದ ಈ ಸ್ಥಳಕ್ಕೆ ವಿದುರಾಶ್ವತ್ಥ ಎನ್ನುವ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಅಶ್ವತ್ಥ ಮರವನ್ನು ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೋಪಿಣೆ ಅಗ್ರತಃ ಶಿವರುಪಾಯ ವೃಕ್ಷ ರಾಜಾಯತೆ ನಮಃ. ಸನಾತನ ಶ್ಲೋಕಗಳಲ್ಲಿ ವರ್ಣಿಸಲಾಗಿದೆ. ಸಂತಾನ ಸಮಸ್ಯೆ, ನಾಗ ದೋಷ ಸಮಸ್ಯೆ, ಆರೋಗ್ಯ ಸಮಸ್ಯೆ , ಕೌಟುಂಬಿಕ ಕಲಹ ಇರುವವರು ಈ ಕ್ಷೇತ್ರಕ್ಕೆ ಬಂದು ಅಶ್ವತ್ಥ ಮರವನ್ನು ಪ್ರದಕ್ಷಿಣೆ ಹಾಕಿ ನಾಗರ ಕಲ್ಲನ್ನು ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಹರಕೆ ಹೊತ್ತರೆ ಅವರ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ.
ಇನ್ನೂ ಹೊಸದಾಗಿ ಮದುವೆಯಾದ ನವಜೋಡಿಗಳು ಇಲ್ಲಿಗೆ ಬಂದು ದೇವರನ್ನು ದರ್ಶನ ಮಾಡಿ ಪೂಜೆ ಮಾಡಿಸುವುದರಿಂದ ಅವರ ದಾಂಪತ್ಯ ಜೀವನ ಸುಖ ಸಂತೋಷ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಅಶ್ವತ್ಥ ನಾರಾಯಣ ನ ಗುಡಿ ಸುತ್ತಲೂ ಗಣಪತಿ, ಆಂಜನೇಯ, ಭವಾನಿ ಶಂಕರ, ಶ್ರೀರಾಮ, ಶ್ರೀದೇವಿ, ಭೂದೇವಿ ಹಾಗೂ ನವಗ್ರಹಗಳ ಗುಡಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಇಲ್ಲಿ ದೇವರ ರಥೋತ್ಸವ ನೆರವೇರಿಸಲಾಗುತ್ತದೆ. ವಿದುರಾಶ್ವತ್ಥ ಕೇವಲ ಪೌರಾಣಿಕವಾಗಿ ಮಾತ್ರವಲ್ಲದೆ ಐತಿಹಾಸಿಕವಾಗಿಯೂ ವಿಶೇಷವಾದ ಮಹತ್ವವನ್ನು ಹೊಂದಿದೆ. ಈ ಸ್ಥಳವು ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ಧಿ ಪಡೆದಿದೆ. 1938 ರಲ್ಲೀ ಹಲವಾರು ಪ್ರತಿಭಟನಾಕಾರರು ಬ್ರಿಟಿಷರ ಗುಂಡೇಟಿಗೆ ಬಲಿ ಆಗಿದ್ದು, ಅವರ ಶಿಲಾ ಸ್ಮಾರಕ ಹಾಗೂ ವೀರ ಸೌಧವನ್ನು ಇಲ್ಲಿ ನಿರ್ಮಿಸಲಾಗಿದೆ. ಅತ್ಯಂತ ಪ್ರಾಚೀನವಾದ ಈ ದೇವಸ್ಥಾನ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿರುವ ನಾಗರ ಕಲ್ಲುಗಳಿಗೆ ಭಕ್ತಾದಿಗಳು ನೇರವಾಗಿ ಅರಿಶಿನ ನೀರಿನ ಅಭಿಷೇಕ ಮಾಡಬಹುದು. ಈ ವಿದುರಾಶ್ವತ್ಥ ನಾರಾಯಣ ದೇವಾಲಯವು ಕೋಲಾರ ಜಿಲ್ಲೆಯ ಗೌರಬಿದನೂರು ತಾಲೂಕಿನ ವಿದುರಾಶ್ವತ್ಥ ಎಂಬ ಪ್ರದೇಶದಲ್ಲಿ ಇದೆ. ಸಾಧ್ಯವಾದರೆ ಈ ಪುರಾಣ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿ ಆ ದೇವನನ್ನು ಕಣ್ಣು ತುಂಬಿಕೊಳ್ಳಿ. ಶುಭದಿನ.