ಇಲ್ಲಿ ನೆಲೆಸಿದ್ದಾನೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಕಪ್ಪತ ಮಲ್ಲೇಶ್ವರ ಸ್ವಾಮಿ..!!!

ಇಲ್ಲಿ ನೆಲೆಸಿದ್ದಾನೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಕಪ್ಪತ ಮಲ್ಲೇಶ್ವರ ಸ್ವಾಮಿ..!!!

ನಮಸ್ತೆ ಪ್ರಿಯ ಓದುಗರೇ, ಬಿಡುವಿನ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುವುದು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ನಾವು ಹೋಗುವ ಸ್ಥಳ ಹಚ್ಚ ಹಸಿರಿನಿಂದ ಕೂಡಿದ್ದು ಅಲ್ಲಿ ದೇವರ ಸಾನಿಧ್ಯ ಕೂಡ ಇದ್ರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವಾ? ಬನ್ನಿ ಇವತ್ತಿನ ಲೇಖನದಲ್ಲಿ ಮನವನ್ನು ತಣಿಸುವ ಹಚ್ಚ ಹಸಿರಿನಿಂದ ಕೂಡಿದ ಹಾಗೂ ಸಾಕ್ಷಾತ್ ಪರಮೇಶ್ವರ ಇಷ್ಟ ಪಟ್ಟು ಬಂದು ನೆಲೆಸಿದ ಸ್ಥಳವನ್ನು ಕಣ್ಣು ತುಂಬಿಕೊಂಡು ಬರೋಣ. ಸಸ್ಯ ಸಂಪತ್ತಿನ ಹೆಸರಾಗಿರುವ ಕಪ್ಪತ ಗುಡ್ಡವನ್ನು ಡ್ರೋಣಗಿರಿ, ಸುವರ್ಣ ಗಿರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕಪ್ಪತ ಗುಡ್ಡದಲ್ಲಿ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು ಕಾಣ ಸಿಗುತ್ತೆ. ಈ ಗುಡ್ಡದಲ್ಲಿ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು ಇರಲು ಕಾರಣ ಆಂಜನೇಯ ಸ್ವಾಮಿ ಎಂಬ ನಂಬಿಕೆ ಇದೆ. ಆಂಜನೇಯ ಸ್ವಾಮಿ ಲಂಕೆಗೆ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುವಾಗ ಸಂಜೀವಿನಿ ಪರ್ವತದ ಸಣ್ಣ ಭಾಗ ಈ ಪ್ರದೇಶದಲ್ಲಿ ಬಿದ್ದಿತು ಹೀಗಾಗಿ ಇಲ್ಲಿ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು ಹುಟ್ಟಿಕೊಂಡವು ಎಂಬ ನಂಬಿಕೆ ಇದೆ. ಕಪಿಲ ಮಹರ್ಷಿಗಳು ಈ ಗುಡ್ಡದಲ್ಲಿ ತಪಸ್ಸನ್ನು ಆಚರಿಸಿದರು ಎಂಬ ಪ್ರತೀತಿ ಕೂಡ ಇದೆ. ಕಪ್ಪತ ಗುಡ್ಡದಲ್ಲಿ ಹೆಜ್ಜೆ ಹೆಜ್ಜೆಗೂ ದೇವರ ಸಾನಿಧ್ಯ ಇದ್ದು, ಗುಡ್ಡದ ಮಧ್ಯ ಭಾಗದಲ್ಲಿ ಇರುವ ಕಪ್ಪತ ಮಲ್ಲೇಶ್ವರ ನನ್ನು ಈ ಗುಡ್ಡದ ಆರಾಧ್ಯ ದೇವನಾಗೀ ಪೂಜಿಸಲಾಗುತ್ತದೆ.

 

70 ಗಿರಿಗಿಂತ ಕಪ್ಪತ ಗಿರಿ ದೊಡ್ಡದು ಎಂಬ ನಾಣ್ಣುಡಿ ಕೂಡ ಈ ಗುಡ್ಡದ ವೈಶಿಷ್ಟ್ಯವನ್ನು ಸಾರುತ್ತದೆ. ಸಾಧು ಪುರುಷರು ತಪಸ್ಸನ್ನು ಮಾಡುತ್ತಿದ್ದ ಈ ಸ್ಥಳದಲ್ಲಿ ಪರಮೇಶ್ವರನು ಉದ್ಭವ ಲಿಂಗ ರೂಪಿಯಾಗಿ ಭ್ರಮರಾಂಬ ದೇವಿಯ ಜೊತೆ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹರಸುತ್ತಿದ್ದಾನೆ. ಇನ್ನೂ ಇಲ್ಲಿ ನೆಲೆಸಿರುವ ಕಪ್ಪತ ಮಲ್ಲೇಶ್ವರ ಸ್ವಾಮಿ ಬಹುಬೇಗ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಸ್ವಾಮಿ ಆಗಿದ್ದು, ಮಕ್ಕಳು ಆಗದವರು ಈ ಕ್ಷೇತ್ರಕ್ಕೆ ಬಂದು ಬಟ್ಟೆಯಿಂದ ತೊಟ್ಟಿಲು ಮಾಡಿ ಹೋದರೆ ಅಥವಾ ತೊಟ್ಟಿಲನ್ನು ನೀಡ್ತಿವಿ ಅಂತ ಹರಕೆ ಹೊತ್ತರೆ ಅವರಿಗೆ ಸಂತಾನ ಪ್ರಾಪ್ತಿ ಆಗುತ್ತೆ. ಸ್ವಂತ ಮನೆ ಕಟ್ಟಬೇಕು ಎಂಬ ಆಸೆ ಇರುವವರು ಇಲ್ಲಿಗೆ ಬಂದು ಒಂದರ ಮೇಲೆ ಒಂದು ಕಲ್ಲು ಇಟ್ಟು ಮನೆ ರೀತಿ ಮಾಡಿದ್ರೆ ಅವರಿಗೆ ಆದಷ್ಟು ಬೇಗ ಸ್ವಂತ ಮನೆ ಕಟ್ಟುವ ಯೋಗ ಬರುತ್ತೆ ಎಂಬ ನಂಬಿಕೆ ಇದೆ. ಇಂದಿಗೂ ಕೂಡ ಭಕ್ತರು ದಾರಿ ಉದ್ದಕ್ಕೂ ಕಲ್ಲಿನಿಂದ ಕಟ್ಟಿರುವ ಮನೆಯನ್ನು ನಾವಿಲ್ಲಿ ನೋಡಬಹುದು. ವಿಧ್ಯಾಭ್ಯಾಸ ಸಮಸ್ಯೆ ಉದ್ಯೋಗ ಸಮಸ್ಯೆ ವಿವಾಹ ವಿಳಂಬ ಸಮಸ್ಯೆ ಕೌಟುಂಬಿಕ ಸಮಸ್ಯೆ ಹೀಗೆ ಏನೇ ಸಮಸ್ಯೆ ಇದ್ದರೂ ಈ ಕ್ಷೇತ್ರಕ್ಕೆ ಬಂದು ಕಪ್ಪತ ಮಲ್ಲಯ್ಯನಲ್ಲಿ ತಂದೆ ನಮ್ಮ ಕಷ್ಟಗಳನ್ನು ಪರಿಹರಿಸು ನಮ್ಮ ಕೈಲಾದ ಸೇವೆ ಮಾಡುತ್ತೇವೆ ಎಂದು ಹರಕೆ ಹೊತ್ತರೆ ಎಲ್ಲ ಸಮಸ್ಯೆಗಳು ಬಹುಬೇಗ ದೂರ ಆಗುತ್ತೆ ಎನ್ನುವುದು ಈ ದೇವನನ್ನು ನಂಬಿರುವ ಭಕ್ತರ ಮನದ ಮಾತಾಗಿದೆ.

 

ಕಪ್ಪತ ಗುಡ್ಡದಲ್ಲಿ ಕಪ್ಪತ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಅಲ್ಲದೆ ಹಳೇ ಮಠ ಗಂಗೆ ಬಾವಿ ಮಠ, ನಂದಿವೇರಿ ಮಠ ಇದ್ದು ಬೆಟ್ಟದ ತುತ್ತ ತುದಿಯಲ್ಲಿ ಶ್ರೀ ಗಾಳಿ ಗುಂಡಿ ಬಸವಣ್ಣ ದೇವರನ್ನು ನಾವು ಕಾಣಬಹುದು. ಹಚ್ಚ ಹಸುರಿನ ಗಿಡ ಮರಗಳಿಂದ ಕೂಡಿದ ಕಪ್ಪತ ಗುಡ್ಡದ ತುತ್ತುದಿಯಲ್ಲಿ ನಿಂತು ಸುತ್ತಲಿನ ಪ್ರಾಕೃತಿಕ ಸೌಂದರ್ಯ ಕಣ್ಣು ತುಂಬಿಕೊಳ್ಳಬಹುದು. ಮಳೆಗಾಲ ಹಾಗೂ ಚಳಿಗಾಲದಲ್ಲಿ ಕಪ್ಪತ ಗುಡ್ಡದ ಸೌಂದರ್ಯ ನೂರ್ಮಡಿ ಆಗಿ ನೋಡುಗರ ಕಣ್ಣಿಗೆ ಹಸಿರಿನ ಹಬ್ಬವನ್ನು ಉಂಟು ಮಾಡುತ್ತದೆ. ಈ ಗುಡ್ಡಕ್ಕೆ ಚಾರಣ ಮಾಡುವುದು ಕೂಡ ಒಂದು ಸುಂದರ ಅನುಭವ ಆಗಿದೆ. ಸಾಕಷ್ಟು ಜನರು ಸೂರ್ಯೋದಯವನ್ನು ಕಣ್ ತುಂಬಿಕೊಳ್ಳಲು ಕಪ್ಪತ ಗುಡ್ಡಕ್ಕೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿ ಜಾತ್ರೆಯನ್ನು ಆಚರಿಸುತ್ತಾರೆ. ಸೋಮವಾರ ಹಾಗೂ ಅಮಾವಾಸ್ಯೆ ದಿನ ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಪ್ರತಿ ಅಮಾವಾಸ್ಯೆ ಗೆ ಭೇಟಿ ನೀಡುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ. ಈ ಸ್ಥಳವನ್ನು ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಗಾಳಿ ಬೀಸುವ ಗುಡ್ಡ ಎಂದು ಹೇಳಲಾಗುತ್ತದೆ. ಧಾರ್ಮಿಕ ಹಾಗೂ ಪ್ರಾಕೃತಿಕ ಸೌಂದರ್ಯದ ಕೂಡಿದ ಕಪ್ಪತ ಮಲ್ಲೇಶ್ವರ ಸ್ವಾಮಿ ದೇವಾಲಯವು ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಬರುವ ಕಪ್ಪತ ಗುಡ್ಡದಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಿರಿ. ಶುಭದಿನ.

ಭಕ್ತಿ