ಇದು ಸೀತಾ ದೇವಿಯನ್ನು ರಕ್ಷಿಸಲು ಜಟಾಯು ಪಕ್ಷಿ ತನ್ನ ಪ್ರಾಣವನ್ನು ತೆತ್ತು ಮೋಕ್ಷ ಪಡೆದ ಸ್ಥಳ..!!

ನಮಸ್ತೆ ಪ್ರಿಯ ಓದುಗರೇ, ಪ್ರಭು ಶ್ರೀರಾಮಚಂದ್ರನು ಹುಟ್ಟಿದ್ದು ಅಯೋಧ್ಯೆ ಅಲ್ಲಿಯೇ ಆದರೂ ಸೀತಾನ್ವೇಷಣೆ ಮಾಡುತ್ತಾ ಪುರುಷೋತ್ತಮ ನು ತನ್ನ ಪಾದ ಸ್ಪರ್ಶ ಮಾಡಿದ್ದು ದಕ್ಷಿಣ ಭಾರತದಲ್ಲಿ. ರಾಮಾಯಣದಲ್ಲಿ ನಡೆದ ಪ್ರತಿಯೊಂದು ಘಟನೆಗಳು ನಮಗೆ ಜೀವನದ ಮೌಲ್ಯವನ್ನು ತಿಳಿಸಿಕೊಡುತ್ತದೆ. ಅದ್ರಲ್ಲೂ ರಾಮನ ಬಂಟನಾದ ಆಂಜನೇಯ ಸ್ವಾಮಿ ಹುಟ್ಟಿದ್ದು ಅಂಜನಾದ್ರಿ ಬೆಟ್ಟದ ಮೇಲೆ ಆದ್ರೂ ಸೀತಪಾಹರಣ ತಡೆಯಲು ಹೋಗಿ ತನ್ನ ಪ್ರಾಣವನ್ನು ಬಿಟ್ಟ ಜಟಾಯು ಪಕ್ಷಿ ಪ್ರಾಣವನ್ನು ಬಿಟ್ಟಿದ್ದು, ಈ ಕ್ಷೇತ್ರದಲ್ಲಿಯೇ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ರಾಮಾಯಣದಲ್ಲಿ ಸೀತೆಗೆ ರಕ್ಷಣೆ ನೀಡಲು ಹೋಗಿ ತನ್ನ ಪ್ರಾಣವನ್ನು ತೆತ್ತ ಜಟಾಯು ಪಕ್ಷಿಯ ಮಹೀಮನ್ವಿತ ಕ್ಷೇತ್ರದ ಕುರಿತು ಮಾಹಿತಿಯನ್ನು ಪಡೆದುಕೊಂಡು ಬರೋಣ. ಸಮುದ್ರ ಮಟ್ಟದಿಂದ ಸುಮಾರು 3469 ಮೀಟರ್ ಎತ್ತರದಲ್ಲಿ ಇರುವ ಜಟಂಗಿ ರಾಮೇಶ್ವರ ಬೆಟ್ಟದಲ್ಲಿ ಪುರಾಣ ಕಾಲದ ಪ್ರಸಿದ್ಧ ದೇವಾಲಯ ಇದ್ದು ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ.

 

ಬಂಗಾರ ವರ್ಣದ ಗೋಪುರ, ಪ್ರಾಂಗಣ ಗರ್ಭ ಗೃಹ ಹೊಂದಿದೆ. ಈ ಆಲಯದಲ್ಲಿ ಜಟಂಗಿ ರಾಮೇಶ್ವರ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾ ಇದ್ದು, ಭಕ್ತಿಯಿಂದ ಈ ದೇವರ ಬಳಿ ಕೊರಿಕೊಂಡರೆ ಮನಸ್ಸಿನ ಎಲ್ಲಾ ಕೋರಿಕೆಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಇನ್ನೂ ಕಲ್ಲಿನಿಂದ ನಿರ್ಮಿಸಿರುವ ಈ ಸ್ಥಳಕ್ಕೆ ರಾಮಾಯಣದಲ್ಲಿ ಬರುವ ಜಟಾಯು ಪಕ್ಷಿಗೆ ಒಂದು ಅವಿನಾಭಾವ ಸಂಬಂಧ ಇದೆ. ಈ ಬೆಟ್ಟದ ಒಂದು ಭಾಗದಲ್ಲಿ ಜಟಾಯು ಪಕ್ಷಿಯ ಸಮಾಧಿ ಇದೆ ಎಂದು ಹೇಳಲಾಗುತ್ತದೆ. ರಾಮಾಯಣ ಕಾಲದಲ್ಲಿ ರಾವಣನು ಸೀತೆಯನ್ನು ಅಪಹರಿಸಿಕೊಂಡು ಪುಷ್ಪಕ ವಿಮಾನದಲ್ಲಿ ಕೊಂಡುಯ್ಯುವಾಗ ಜಟಾಯು ಪಕ್ಷಿ ಆತನ ವಿರುದ್ಧ ಹೋರಾಟ ಮಾಡುತ್ತೆ. ಹೀಗೆ ಜಟಾಯು ಪಕ್ಷಿ ರಾವಣನ ಜೊತೆ ಯುದ್ಧ ಮಾಡುವಾಗ ರಾವಣನ ಜಟಾಯುವಿನ ರೆಕ್ಕೆಯನ್ನು ತುಂಡರಿಸಿ ಬಿಡುತ್ತಾನೆ. ಆಗ ಗಾಯಗೊಂಡ ಪಕ್ಷಿ ಈ ಬೆಟ್ಟದ ಮೇಲೆ ಬಿತ್ತು. ಮುಂದೆ ಶ್ರೀರಾಮಚಂದ್ರನು ಸೀತೆಯನ್ನು ಹುಡುಕುತ್ತಾ ಈ ಸ್ಥಳಕ್ಕೆ ಬಂದಾಗ ಜಟಾಯು ಪಕ್ಷಿ ಸೀತೆಯನ್ನು ರಾವಣ ಕರೆದೊಯ್ದುದನ್ನಾ ಹೇಳಿ ತನಗೆ ಮೋಕ್ಷವನ್ನು ಅನುಗ್ರಹಿಸಬೇಕಂದು ಹಾಗೂ ತಾನು ಪ್ರಾಣವನ್ನು ಬಿಡುವ ಜಾಗದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಬೇಕು ಎಂದು ಶ್ರೀರಾಮನನ್ನು ವಿನಂತಿಸಿಕೊಂಡಿ್ತು.

 

ಆಗ ಶ್ರೀರಾಮನು ಜಟಾಯುವಿನ ಭಕ್ತಿಗೆ ಮೆಚ್ಚಿ ಜಟಾಯುವಿಗೆ ಮೋಕ್ಷವನ್ನು ಕರುಣಿಸಿ ಈ ಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ದೇವಸ್ಥಾನದ ಸುತ್ತ ಮುತ್ತ 101 ಶಿವ ಲಿಂಗ ಇರುವ ಪುಟ್ಟ ಪುಟ್ಟ ಗುಡಿಯನ್ನು ನೋಡಬಹುದು. ದೇಗುಲದ ಒಂದು ಭಾಗದಲ್ಲಿ ನಾಗ ದೇವತೆಯ ವಿಗ್ರಹ ಇದೆ. ಇಲ್ಲಿ ಕಾಲಭೈರೇಶ್ವರ, ಚಾಮುಂಡಿ, ಗಣಪತಿ ದೇವರುಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನೂ ಬೆಟ್ಟದ ಮೇಲೆ ಸೀತಾ ದೋಣಿ, ಕಮಲದ ದೋಣಿ ಎಂಬೆಲ್ಲ ಹೆಸರಿನಿಂದ ಕರೆಯುವ ಪುಟ್ಟ ಪುಟ್ಟ ನೀರಿನ ಸೆಲೆಗಳು ಇದ್ದು, ಇವು ಭಕ್ತರ ಕಣ್ಮನ ಸೆಳೆಯುತ್ತವೆ. ಈ ದೇವಸ್ಥಾನದ ಮೇಲೆ ನಿಂತು ನೋಡಿದ್ರೆ ಪ್ರಕೃತಿಯ ಅದ್ಭುತ ಸನ್ನಿವೇಶಗಳನ್ನು ನೋಡಬಹುದು. ಈ ಬೆಟ್ಟದ ಸಮೀಪದಲ್ಲಿ ಅಶೋಕ ಚಕ್ರವರ್ತಿ ಕೆತ್ತಿಸಿರುವ ಶಿಲಾ ಶಾಸನಗಳು ಇದ್ದು, ಇವನ್ನು ಕೂಡ ನೋಡಿಕೊಂಡು ಬರಬಹುದು. ಪ್ರತಿ ವರ್ಷ ಯುಗಾದಿ ಹಬ್ಬದಂದು ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಅಲ್ಲದೆ ಇಲ್ಲಿಗೆ ಬರುವ ಭಕ್ತಾದಿಗಳಿಗೆ ನೀರು ಮಜ್ಜಿಗೆ ವ್ಯವಸ್ಥೆ, ದಾಸೋಹದ ವ್ಯವಸ್ಥೆ ಇರುತ್ತದೆ. ಚಿತ್ರದುರ್ಗ, ರಾಯದುರ್ಗ ಕಲ್ಯಣದುರ್ಗ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಜಾತ್ರೆಗೆ ಆಗಮಿಸಿ ಸ್ವಾಮಿಯ ಆಶೀರ್ವಾದ ಪಡೆಯುತ್ತಾರೆ. ಇನ್ನೂ ಈ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ದೇವರಿಗೆ ಬಗೆ ಬಗೆಯ ಪೂಜೆ ನಡೆಯುತ್ತದೆ. ಸೋಮವಾರ ಹಾಗೂ ಅಮಾವಾಸ್ಯೆಯಂದು ರಾಮೇಶ್ವನಿಗೆ ಅಭಿಷೇಕ ಸಹಿತ ವಿಶೇಷ ಪೂಜೆ ನಡೆಯುತ್ತದೆ. ಈ ಸಮಯದಲ್ಲಿ ಸರ್ವಾಲಂಕೃತ ಭೂಷಿತ ಸ್ವಾಮಿಯನ್ನು ನೋಡುವುದು ಕಣ್ಣಿಗೆ ಹಬ್ಬ. ದೇಗುಲದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ 9482066622 ದೂರವಾಣಿ ಸಂಖ್ಯೆ ಗೆ ಕರೆ ಮಾಡಿ. ಈ ದೇವಾಲಯವನ್ನು ಬೆಳಿಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೂ ದರ್ಶನ ಮಾಡಬಹುದು. ಈ ದೇಗುಲವು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವ ಸಮುದ್ರ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ರಾಮಾಯಣದ ಕಥೆಯನ್ನು ಸಾರುವ ಈ ಅಪರೂಪದ ದೇವಾಲಯ ದರ್ಶನ ಮಾಡಿ ಬನ್ನಿ. ಶುಭದಿನ.

Leave a comment

Your email address will not be published. Required fields are marked *