ನಮಸ್ತೆ ಪ್ರಿಯ ಓದುಗರೇ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೆ ಅವರನ್ನು ಎಂದಿಗೂ ಆ ದೇವ ಕೈ ಬಿಡೋದಿಲ್ಲ. ನಮ್ಮ ರಾಜ್ಯದಲ್ಲಿ ಸಾಕಷ್ಟು ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯಗಳು ಇವೆ. ಆದ್ರೆ ಕೆಲವೊಂದು ದೇವಾಲಯಗಳು ಮಾಹಿತಿ ಕೊರತೆಯಿಂದ ಹೆಚ್ಚಿನ ಜನರಿಗೆ ಚಿರ ಪರಿಚಿತ ಆಗಿಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಅತ್ಯಂತ ಹಳೆಯ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹವನ್ನು ಹೊಂದಿರುವ ಪುರಾತನವಾದ ದೇವಾಲಯ ದರ್ಶನ ಮಾಡಿ ಬರೋಣ. ವಾರಾಹಿ ನದಿಯ ತೀರದಿಂದ ಪಾವನವಾಗಿರುವ ಹಾಲಾಡಿಯಲ್ಲಿ ಪುರಾತನವಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯವಿದ್ದು, ಈ ದೇಗುಲವನ್ನು ಸ್ವಲ್ಪ ವರ್ಷಗಳ ಹಿಂದೆ ಪುನರ್ ನಿರ್ಮಾಣ ಮಾಡಲಾಗಿದೆ. ಸಂಪೂರ್ಣವಾಗಿ ಶಿಲೆಯಿಂದ ನಿರ್ಮಿತವಾದ ಈ ದೇಗುಲ ಗರ್ಭಗೃಹ, ಪ್ರಾಂಗಣ, ಪ್ರದಕ್ಷಿಣಾ ಪಥ, ದೀಪ ಸ್ತಂಭವನ್ನು ಒಳಗೊಂಡಿದೆ. ಈ ಕ್ಷೇತ್ರಕ್ಕೆ ಬಂದು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಗೆ ಭಕ್ತಿಯಿಂದ ಪ್ರಾರ್ಥಿಸಿದರೆ ಸಕಲ ಆಶೋತ್ತರಗಳು ನೆರವೇರುವುದು ಮಾತ್ರವಲ್ಲದೆ ಮನಸಿನಲಿ ಅಂದುಕೊಂಡ ಕಾರ್ಯಗಳು ಎಲ್ಲವೂ ಸೂತ್ರವಾಗಿ ನಡೆಯುತ್ತದೆ ಎಂಬ ಪ್ರತೀತಿ ಇದೆ.
ಇನ್ನೂ ಈ ಕ್ಷೇತ್ರದಲ್ಲಿ ಇರುವ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹವನ್ನು ಅಗಸ್ತ್ಯ ಮುನಿಗಳು ಪೂಜಿಸಿದ್ದಾರೆ ಎಂಬ ಪ್ರತೀತಿ ಇದ್ದು, ಇಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿಯು ಯೋಗ ಭಂಗಿಯಲ್ಲಿ ಕುಳಿತು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ನರಸಿಂಹ ಸ್ವಾಮಿ ಯೋಗ ಭಂಗಿಯಲ್ಲಿ ಕುಳಿತಿದ್ದರಿಂದ ಈ ದೇವನನ್ನು ಶ್ರೀ ಯೋಗ ಲಕ್ಷ್ಮೀ ನರಸಿಂಹ ಸ್ವಾಮಿ ಎಂದು ಹೇಳಲಾಗುತ್ತದೆ. ಅಲ್ಲದೆ ಬಹಳ ಹಿಂದೆ ಶೃಂಗೇರಿ ಪೀಠದ ಜಗದ್ಗುರು ಗಳು ಆದ ಶ್ರೀ ಜಗದ್ಗುರು ನರಸಿಂಹ ಭಾರತಿ ಮಹಾ ಸ್ವಾಮಿಗಳು ಒಮ್ಮೆ ಈ ಸ್ಥಳಕ್ಕೆ ಬಂದು ವಿಶ್ರಮಿಸಿ ದ್ದಾಗ ಅವರ ಕನಸಿನಲ್ಲಿ ಸಾಕ್ಷಾತ್ ನರಸಿಂಹ ಸ್ವಾಮಿ ಬಂದು ಕಾಣಿಸಿಕೊಂಡು ವತ್ಸ ನಾನು ಇಲ್ಲಿ ವಾರಾಹಿ ನದಿಯಲ್ಲಿ ವಿಗ್ರಹ ರೂಪದಲ್ಲಿ ನೆಲೆಸಿದ್ದೇನೆ. ವಿಶ್ವಕರ್ಮ ರೂ ಕೆತ್ತಿದ ವಿಗ್ರಹವನ್ನು ಅಗಸ್ತ್ಯರು ಪೂಜಿಸಿದ್ದರೆ. ನೀನು ನನ್ನ ವಿಗ್ರಹವನ್ನು ಹೊರ ತೆಗೆದು ನದಿ ತೀರದಲ್ಲಿ ಪ್ರತಿಷ್ಠಾಪಿಸಿ ಎಂದು ಹೇಳಿದರಂತೆ. ಸ್ವಾಮಿಯ ಅಪ್ಪಣೆಯಂತೆ ಶ್ರೀ ನರಸಿಂಹ ಭಾರತಿ ಸ್ವಾಮಿಗಳು ಈ ಕ್ಷೇತ್ರದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ ಪೂಜಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿ ನೆಲೆಸಿರುವ ಲಕ್ಷ್ಮೀ ನರಸಿಂಹ ಸ್ವಾಮಿ ಭಕ್ತನುಗ್ರಹ ತತ್ಪರ ಆಗಿದ್ದು, ಚತುರ್ಭುಜ ದಾರಿಯಾಗಿ ಶಂಖ ಚಕ್ರ ಗದಾ ಹಿಡಿದು ಆದಿಶೇಷನ ಮೇಲೆ ಯೋಗ ಮುದ್ರೆಯಲ್ಲಿ ಲಕ್ಷ್ಮೀ ದೇವಿ ಸಮೇತರಾಗಿ ದರ್ಶನ ನೀಡುತ್ತಿದ್ದಾನೆ.
ಸಾಮಾನ್ಯವಾಗಿ ಹೆಚ್ಚಿನ ನರಸಿಂಹ ಸ್ವಾಮಿ ವಿಗ್ರಹದಲ್ಲಿ ಲಕ್ಷ್ಮೀ ದೇವಿಯು ನೇರವಾಗಿ ಭಕ್ತರನ್ನು ನೋಡುತ್ತಿರುವಂತೆ ಕಾಣಿಸುತ್ತದೆ ಆದ್ರೆ ಇಲ್ಲಿನ ಲಕ್ಷ್ಮೀ ದೇವಿ ನರಸಿಂಹ ಸ್ವಾಮಿಯ ಮುಖವನ್ನು ನೋಡುತ್ತಾ ಕುಳಿತಿರುವಂತೆ ಕಾಣಿಸುತ್ತದೆ. ಈ ರೀತಿ ಲಕ್ಷ್ಮೀ ದೇವಿಯು ನರಸಿಂಹ ಸ್ವಾಮಿಯ ಮುಖವನ್ನು ನೋಡುತ್ತಾ ಕುಳಿತಿರುವಂತೆ ತೋರುವ ವಿಗ್ರಹವನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಶೃಂಗೇರಿ ಮಠಕ್ಕೆ ಈ ದೇವಾಲಯಕ್ಕೆ ಅವಿನಾಭಾವ ಸಂಬಂಧವಿದೆ. ಶೃಂಗೇರಿ ಪೀಠದ ಗುರುಗಳು ಆಗಾಗ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ನರಸಿಂಹ ಜಯಂತಿ ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನರಸಿಂಹ ಜಯಂತಿಯಂದು ಇಲ್ಲಿನ ರಥೋತ್ಸವ ಕೂಡ ನಡೆಯುತ್ತದೆ. ಆ ಸಮಯದಲ್ಲಿ ಹಾಲಾಡಿ ಗ್ರಾಮದ ಜನರು ಮಾತ್ರವಲ್ಲದೆ ಉಡುಪಿ, ಕುಂದಾಪುರ ಹಾಗೂ ಶೃಂಗೇರಿ ಇಂದ ಕೂಡ ಭಕ್ತರು ಆಗಮಿಸಿ ಸ್ವಾಮಿಯ ಆಶೀರ್ವಾದ ಪಡೆಯುತ್ತಾರೆ. ನಿತ್ಯವೂ ಪೂಜೆಗೊಳ್ಳುವ ಇಲ್ಲಿನ ನರಸಿಂಹ ಸ್ವಾಮಿಗೆ ಶನಿವಾರ ಪವಾಮಾನ ಅಭಿಷೇಕ ಸಹಿತ ವಿಶೇಷ ಪೂಜೆ ನಡೆಯುತ್ತದೆ. ಈ ಪುಣ್ಯ ಕ್ಷೇತ್ರವನ್ನು ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಭೇಟಿ ನೀಡುವ ಭಕ್ತ ಜನರು ಅಲಂಕಾರ ಸೇವೆ, ತುಳಸಿ ಅರ್ಚನೆ, ಅಭಿಷೇಕ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಅನೇಕ ವಿಶೇಷತೆಗಳಿಂದ ಕೂಡಿರುವ ಲಕ್ಷ್ಮೀ ನರಸಿಂಹ ಸ್ವಾಮಿಯ ಸಾನಿಧ್ಯ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಎಂಬ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಪುಣ್ಯ ಕ್ಷೇತ್ರದ ದರ್ಶನ ಮಾಡಿ ಬನ್ನಿ. ಶುಭದಿನ.