ನಮಸ್ತೆ ಪ್ರಿಯ ಓದುಗರೇ, ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣ ಅಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಯಾವುದೋ ಒಂದು ದೌರ್ಬಲ್ಯ ಇರುತ್ತೆ. ಕೆಲವೊಮ್ಮೆ ಮನುಷ್ಯ ತನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಇನ್ಯಾವುದೋ ಚಟಗಳಿಗೆ ದಾಸ ಆಗಿ ಬಿಡುತ್ತಾನೆ. ಅದರಲ್ಲಿ ಕುಡಿತ ಎಂಬ ದುಶ್ಚಟ ಅಂಟಿಕೊಂಡರೆ ಬಿಡಿಸುವುದು ಅಸಾಧ್ಯ ಎಂದೇ ಹೇಳಬಹುದು. ಆದ್ರೆ ನಾವು ಇವತ್ತು ಮಾಹಿತಿ ಹೊತ್ತು ತಂದಿರುವ ದೇವಾಲಯ ಕುಡುಕರ ಕುಡಿತವನ್ನು ಬಿಡಿಸುವ ದೇವಾಲಯ ಎಂದು ಖ್ಯಾತ ಆಗಿದೆ. ಬನ್ನಿ ಹಾಗಾದರೆ ಆ ದೇವಾಲಯ ಯಾವುದು ಅಲ್ಲಿ ನಡೆಯುವ ಪವಾಡ ಆದ್ರೂ ಏನು ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಅತ್ಯಂತ ಸುಂದರವಾದ ಪರಿಸರವನ್ನು ಹೊಂದಿರುವ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವನ್ನು ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು, ಈ ಕ್ಷೇತ್ರವು ದುಷ್ಚಟವನ್ನು ಬಿಡಿಸುವ ದೇವಾಲಯ ಎಂಬ ಹೆಸರಿನಿಂದ ಹೆಚ್ಚು ಖ್ಯಾತವಾಗಿದೆ. ಗೋಪುರ,ಪ್ರದಕ್ಷಿಣಾ ಪಥ, ಗರ್ಬಗೃಹ ಒಳಗೊಂಡಿರುವ ಈ ದೇಗುಲದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಸ್ವಯಂಭೂ ಆಗಿ ನೆಲೆಸಿ ಬೇಡಿ ಬಂದ ಭಕ್ತರನ್ನು ಹರಸುತ್ತಿದ್ದಾರೆ.
ಈ ದೇವಾಲಯದಲ್ಲಿ ಮೂರು ಶಿವನ ಲಿಂಗವು ಒಂದೇ ಪೀಠದ ನೆಲೆ ಉದ್ಭವ ಆಗಿರುವುದನ್ನು ನೋಡಬಹುದಾಗಿದೆ. ಈ ಮೂರು ಲಿಂಗಗಳನ್ನು ಬ್ರಹ್ಮ ವಿಷ್ಣು ಮಹೇಶ್ವರ ನ ಸ್ವರೂಪ ಎಂದು ಹೇಳಲಾಗುತ್ತದೆ. ಮಧ್ಯಪಾನ ಧೂಮಪಾನ ಅಥವಾ ಇನ್ಯಾವುದೇ ದುಶ್ಚಟ ಗಳು ಇದ್ರೂ ಅದನ್ನು ಈ ದೇವ ದೂರ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಶಿವರಾತ್ರಿ ಕಳೆದ ಐದು ದಿನಗಳ ನಂತರ ಇಲ್ಲಿ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಆ ಸಮಯದಲ್ಲಿ ಇಲ್ಲಿಗೆ ಬಂದು ದೇವರಿಗೆ ಹರಕೆ ಹೊತ್ತರೆ ದೀಕ್ಷೆ ಪಡೆದರೆ ಅಂಥವರು ಯಾವುದೇ ಪುನಃ ದುಶ್ಚಟಗಳಿಗೆ ಬಲಿ ಆಗುವುದಿಲ್ಲ ಎಂಬ ಪ್ರತೀತಿ ಇದೆ. ರಥೋತ್ಸವ ದ ನಂತರ ದುಶ್ಚಟಗಳನ್ನು ಬಿಡಬೇಕು ಎಂದುಕೊಂಡ ಜನರನ್ನು ಒದ್ದೆ ಬಟ್ಟೆಯಲ್ಲಿ ಕಾವಿ ಬಟ್ಟೆಯನ್ನು ಧರಿಸಿ ಬರುವಂತೆ ಹೇಳಲಾಗುತ್ತದೆ. ನಂತರ ಅವರಿಗೆ ಇನ್ನೂ ಮುಂದೆ ಚಟವನ್ನು ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಸ್ವಾಮಿಯ ಎದುರು ಪ್ರಮಾಣ ಮಾಡಿಸಿ ದೀಕ್ಷೆಯನ್ನು ನೀಡಿ ಕೊರಳಿಗೆ ರುದ್ರಾಕ್ಷಿ ಮಾಲೆಯನ್ನು ಹಾಕಲಾಗುತ್ತದೆ. ಈ ರೀತಿ ಇಲ್ಲಿ ದೀಕ್ಷೆಯನ್ನು ಪಡೆದುಕೊಂಡವರು ಸಂಪೂರ್ಣವಾಗಿ ದುಶ್ಚಟಗಳಿಂದ ದೂರ ಆಗ್ತಾರೆ ಎಂದು ಹೇಳಲಾಗುತ್ತದೆ ಒಂದುವೇಳೆ ದೀಕ್ಷೆ ಪಡೆದು ಪುನಃ ದುಶ್ಚಟಗಳನ್ನು ಮಾಡಿದರೆ ಅಂಥವರಿಗೆ ಮಲ್ಲಿಕಾರ್ಜುನ ಸ್ವಾಮಿ ಅನೇಕ ಬಗೆಯ ಕಷ್ಟಗಳನ್ನು ನೀಡಿ ಅವರನ್ನು ಸರಿ ದಾರಿಗೆ ತರುತ್ತಾರೆ ಎಂದು ನಂಬಿಕೆ ಇದೆ. ಹೀಗಾಗಿ ಇಲ್ಲಿಗೆ ಬಂದು ದೀಕ್ಷೆ ಪಡೆದ ವ್ಯಕ್ತಿಗಳು ಮತ್ತೆ ದುಶ್ಚಟಗಳನ್ನು ಮಾಡುವ ಸಾಹಸಕ್ಕೆ ಕೈ ಹಾಕುವುದಿಲ್ಲ.
ಹೀಗಾಗಿ ಜಾತ್ರೆ ಸಮಯದಲ್ಲಿ ಲಕ್ಷಾಂತರ ಮಂದಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಬಿಡುತ್ತಾರೆ. ಇನ್ನೂ ಬಹಳ ಹಿಂದೆ ಈ ಊರಿನ ಗ್ರಾಮಸ್ಥರ ಮನೆಯಲ್ಲಿ ಇದ್ದ ಒಂದು ಹಸು ನಿತ್ಯವೂ ಹುತ್ತವೊಂದಕ್ಕೇ ಹೋಗಿ ಹಾಲನ್ನು ಸುರಿಸುತ್ತಾ ಇತ್ತು. ಈ ವಿಷಯ ತಿಕಿದ ಗ್ರಾಮಸ್ಥರು ಹುತ್ತದ ಒಳಗಡೆ ಏನಿದೆ ಎಂದು ನೋಡಲು ಹೋದಾಗ ಅವರಿಗೆ ಮೂರು ಉದ್ಭವ ಆಗಿರುವ ಶಿವನ ಲಿಂಗ ಲಭಿಸಿತು ನಂತರ ಲಿಂಗ ಸಿಕ್ಕ ಸ್ಥಳದಲ್ಲಿ ಈ ದೇಗುಲವನ್ನು ನಿರ್ಮಿಸಲಾಯಿತು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಅತ್ಯಂತ ಚಿಕ್ಕ ದೇಗುಲ ಆಗಿದ್ದ ಈ ಸ್ಥಳವು ಮಲ್ಲಿಕಾರ್ಜುನನ ಕೃಪೆಯಿಂದ ಇಂದು ಬೃಹತ್ ದೇವಾಲಯ ಆಗಿ ಹೊರ ಹೊಮ್ಮಿದೆ. ಈ ದೇಗುಲಕ್ಕೆ ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡಿನಿಂದ ಅನೇಕ ಭಕ್ತರು ಆಗಮಿಸುತ್ತಾರೆ. ಮಧ್ಯಪಾನ ಇರಲಿ ಧೂಮಪಾನ ಇರಲಿ ಈ ದೇವನ ಬಳಿ ಬಂದರೆ ಆ ದುಶ್ಚಟಗಳು ದೂರ ಆಗುವುದು ಶತ ಸಿದ್ದ ಎನ್ನುವುದು ಇಲ್ಲಿಗೆ ಭೇಟಿ ನೀಡಿ ದೀಕ್ಷೆ ಪಡೆದು ದುಶ್ಚಟ ಬಿಟ್ಟ ಜನರ ಮನದ ಮಾತಾಗಿದೆ. ಅಲ್ಲದೆ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕೂಡ ಹೊರಬಹುದು. ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತಿ ಸೋಮವಾರ ಇಲ್ಲಿ ದುಶ್ಚಟ ಬಿಡಬೇಕು ಎಂದುಕೊಂಡು ಬರುವ ಜನರಿಗೆ ದೀಕ್ಷೆಯನ್ನು ನೀಡಲಾಗುತ್ತದೆ. ನಿತ್ಯವೂ ಪೂಜೆಗೊಳ್ಳುತ್ತಿರುವ ಕೈದಾಳೇ ಮಲ್ಲಿಕಾರ್ಜುನ ಸ್ವಾಮಿಗೆ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಈ ಪುಣ್ಯ ಕ್ಷೇತ್ರವನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 9.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಈ ಪುಣ್ಯ ಕ್ಷೇತ್ರವೂ ದಾವಣಗೆರೆ ಜಿಲ್ಲೆಯ ಕೈದಾಳೆ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಅದ್ಭುತ ದೇವಾಲಯವನ್ನು ದರ್ಶನ ಮಾಡಿ ಬನ್ನಿ. ಶುಭದಿನ.